Wednesday, 8 June 2016

ಮೂಕಜ್ಜಿಯ ಕನಸುಗಳು

"ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂತಹ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು. ಆದರು ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ" ಎಂಬ ಮುನ್ನುಡಿಯೊಡನೆ ಪ್ರಾರಂಭವಾಗುವ ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು" ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲೇ ಒಂದು ವಿಶಿಷ್ಟ ಕಾದಂಬರಿ. ಇದನ್ನು ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸೇರಿಸಲಾಗದು. ಈ ಕಾದಂಬರಿಯನ್ನು ಓದಿದಾಗಲೇ ಇದಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದರ ಮಹತ್ವ ನಮಗೆ ತಿಳಿಯುವುದು.

ಮೂಕಜ್ಜಿ ಭವಿಷ್ಯ, ವರ್ತಮಾನ ಹಾಗೂ ಭೂತಕಾಲಗಳಲ್ಲಿ ಸರಾಗವಾಗಿ ತಿರುಗಾಡಬಲ್ಲವಳು. ಇಂತಹ ಅದ್ಭುತ ಶಕ್ತಿಯಿಂದಲೇ ಇಲ್ಲಿ ಮೂಕಜ್ಜಿ ನಮಗೆ ವಿಶಿಷ್ಟವಾಗಿ ಕಾಣಿಸುತ್ತಾಳೆ. ಸುಬ್ಬರಾಯ ನಮ್ಮ ಸಂಪ್ರದಾಯ, ಸಂಸ್ಕೃತಿ, ದೇವರುಗಳ ಬಗ್ಗೆ ಎತ್ತುವ ಎಲ್ಲಾ ಪ್ರಶ್ನೆಗಳಿಗೂ ಮೂಕಜ್ಜಿ ತನ್ನದೇ ಆದ ರೀತಿಯಲ್ಲಿ ನೀಡುವ ವಿಶ್ಲೇಷಣೆಗಳಂತು ಅದ್ಭುತವೇ ಸರಿ.

ಕೆಲವು ದಶಕಗಳ ಹಿಂದೆ ಕಾರಂತರು ಬರೆದ ಈ ಕಾದಂಬರಿ ಈಗಿನ ಕಾಲಕ್ಕೂ ಒಪ್ಪುವಂತದ್ದು ಮತ್ತು ಎಲ್ಲಾ ಕಾಲಕ್ಕೂ ಒಪ್ಪುವಂತಹದ್ದೇ ಸರಿ. ಗಲ್ಲಿ ಗಲ್ಲಿಗೆ ದೇವಸ್ಥಾನಗಳನ್ನು ಮಾಡಿಕೊಂಡು, ಮನಸ್ಸಿಗೆ ಬಂದಂತೆ ಹೊಸ ಹೊಸ ದೇವರುಗಳನ್ನು ಸೃಷ್ಟಿ ಮಾಡುತ್ತಾ, ಧರ್ಮ ಮತ್ತು ದೇವರ ಹೆಸರಿನಲ್ಲಿ ನಮ್ಮನ್ನು ಲೂಟಿ ಮಾಡುವ ಜನರ ಮಧ್ಯೆ ನಾವು ಬದುಕುತ್ತಿರುವಾಗ, ದೇವರಿಗೆ ನಾವು ಕೊಟ್ಟಿರುವ ಮತ್ತು ಕೊಡುತ್ತಿರುವ ಸ್ಥಾನವನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವೆಂದು ನನಗೆ ಕಾಣುತ್ತದೆ.

ಇಲ್ಲಿ ನನಗೆ ತುಂಬಾ ಇಷ್ಟವಾದದ್ದು ಕಾರಂತರ ಜೀವನದೃಷ್ಟಿ ಮತ್ತು ಕಲಾಸೃಷ್ಟಿ. ಮೂಕಜ್ಜಿಯಂತಹ ಒಂದು ಪಾತ್ರವನ್ನು ಸೃಷ್ಟಿಸಿರುವುದು, ಆ ಪಾತ್ರದ ಮೂಲಕ ಮಹತ್ತರ ವಿಷಯಗಳನ್ನು ಜಗತ್ತಿಗೆ ತಿಳಿಸಿರುವುದು ಒಂದು ಪ್ರಯೋಗವಲ್ಲವೇ?. ಜಗತ್ತಿಗೆ ಸಾವಿರ ಸಾವಿರ ದೇವರುಗಳು ಇರುವ ಬದಲು ಒಂದೇ ದೇವರು ಇದ್ದರೆ ಸಾಕು ಎಂಬ ಕಾರಂತರ ನಿಲುವು  ಅದೆಷ್ಟೋ ಅರ್ಥಪೂರ್ಣವಾದದ್ದು.

ನನ್ನ ಈ ಬರವಣಿಗೆಯನ್ನು ವಿಮರ್ಶೆಯೆಂದು ತಿಳಿಯುವ ಅಗತ್ಯವಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ಕಾದಂಬರಿಯ ಬಗ್ಗೆ ತಿಳಿಸುವ ಪ್ರಯತ್ನವಷ್ಟೆ.

ಕನ್ನಡದ ಆಯಸ್ಸು ಕನ್ನಡಿಗರ ಕೈಯಲ್ಲಿ

** ಕನ್ನಡದ ಆಯಸ್ಸು ಕನ್ನಡಿಗರ ಕೈಯಲ್ಲಿ **

ಇಂದು ಯಾವೊಬ್ಬ ರಾಜಕಾರಣಿಯೂ ಯಾವ ಸರ್ಕಾರವು ಕನ್ನಡವನ್ನು ಬೆಳೆಸುವುದಿರಲಿ ಉಳಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. 1 2 3 ಎಲ್ಲವನ್ನೂ ಬಿಟ್ಟು ಕುಳಿತಿರುವ ಸರ್ಕಾರದಿಂದ ಏನೇನು ಮಾಡಲಾಗದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಇಂದು ನಾವೇ ಮಾಡಬೇಕಿದೆ. ಅದೆಷ್ಟೋ ಕನ್ನಡ ಪರ ಸಂಘಟನೆಗಳು, ಕನ್ನಡ ಪರ ದನಿ ಎತ್ತುವ ಜನರು, ಫೇಸ್ ಬುಕ್ ಟ್ವಿಟರ್ ನಂತಹ ಸಾಮಾಜಿಕ ತಾಣಗಳಲ್ಲಿ ಕನ್ನಡದ ಉಳಿವಿಗೆ ಪಣತೊಟ್ಟು ನಿಂತಿರುವ ಹಲವಾರು ಮಂದಿಯಿಂದಷ್ಟೆ ಇಂದು ನಮ್ಮ ಭಾಷೆಯನ್ನು ಉಳಿಸಲು ಸಾಧ್ಯ. ಕಪಟ ನಾಟಕವಾಡುವ ರಾಜಕಾರಣಿಗಳನ್ನೇ ಆಗಲಿ, ಕನ್ನಡದ ಅಭಿವೃದ್ಧಿಗಾಗಿ ಸರ್ಕಾರದಿಂದ ರಚನೆಯಾಗಿರುವ ಯಾವುದೇ ಸಂಸ್ಥೆಯನ್ನಾಗಲಿ ನಂಬುವುದು ಸಾಧ್ಯವೇ ಇಲ್ಲ.

ಕನ್ನಡದ ಒಬ್ಬ ಸಿನೆಮಾ ನಟ ಬರ ಪೀಡಿತ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿದರೆ ಅದು ನಮ್ಮ ಜನಕ್ಕೆ ಶೋ ಆಫ್, ಬಕೆಟ್, ಪಬ್ಲಿಸಿಟಿ ಎಂದೆನಿಸುತ್ತದೆ. ಇಂದು ಅದೆಷ್ಟೊ ರಾಷ್ಟ್ರೀಯ ಕನ್ನಡಿಗರು ಹಿಂದಿಯ ದಾಸರಾಗಿ, ಹಿಂದಿ ಜನರ ಗುಲಾಮರಾಗಿ ಬಕೆಟ್ ಹಿಡಿಯುತ್ತಾ ಜೀವನ ಸಾಗಿಸುತ್ತಿದ್ದಾರಲ್ಲ ಇದು ಯಾರ ಗಮನಕ್ಕೂ ಬರಲಿಲ್ಲವೇ?. ಮಾತು ಎತ್ತಿದರೆ ವಿ ಆರ್ ಇಂಡಿಯನ್ಸ್ ಎಂದು ಪಾಠ ಹೇಳುವ ಇಂತಹ ಜನರು ಕನ್ನಡಕ್ಕೆ  ವಲಸಿಗರಿಗಿಂತಲೂ ಅತ್ಯಂತ ಅಪಾಯಕಾರಿ. ತಾಯ್ನಾಡಿಗೆ ನಿಷ್ಪ್ರಯೋಜಕರಾಗಿ ಬದುಕುತ್ತಿರುವ ಇವರು ರಾಷ್ಟ್ರಕ್ಕಾಗಿ ಎನನ್ನಾದರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತದೆಯೇ?. ಇಂತಹ ಜನರ ಬದುಕಲ್ಲಿ ನಿಜವಾಗಿಯೂ ಸಾರ್ಥಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ.

ಇಲ್ಲಿ ನಾನು ಮಾತನಾಡುತ್ತಿರುವುದು ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವ ವಲಸಿಗರ ಬಗ್ಗೆ, ನಮ್ಮ ನಾಡಲ್ಲೇ ಹುಟ್ಟಿ ಇಲ್ಲೇ ಬೆಳೆದು ಕನ್ನಡವನ್ನು ತುಳಿಯತ್ತ ಹಿಂದಿಯ ಅಥವಾ ಪರ ಭಾಷ ಗುಲಾಮರಾಗಿರುವವರ ಬಗ್ಗೆ. 'ಹೊಲಸಿಗರು' ಕನ್ನಡ ಮತ್ತು ಕನ್ನಡಿಗರ ಬಗ್ಗೆ ಇಷ್ಟೆಲ್ಲಾ ಕೀಳಾಗಿ ಮಾತನಾಡುತ್ತಿದ್ದರು ಅನ್ನ ತಿನ್ನುವ ಯಾವೊಬ್ಬ ರಾಜಕಾರಣಿಯೂ  ಇದರ ಬಗ್ಗೆ ಮಾತನಾಡುತ್ತಿಲ್ಲ.

"ವಲಸಿಗರೆ ಮತ್ತು ರಾಷ್ಟ್ರೀಯ ಕನ್ನಡಿಗರೆ, ನೀವು ಕನ್ನಡ ಮಾತನಾಡದ್ದಿದ್ದರು ಪರವಾಗಿಲ್ಲ ನಮ್ಮ ಭಾಷೆಯನ್ನು ಮಾತ್ರ ಕೀಳಾಗಿ ಕಾಣಬೇಡಿ" ಎಂದು ನಾವು ಕೇಳಿಕೊಳ್ಳುವ ಮಟ್ಟಕ್ಕೆ ಸರ್ಕಾರ ನಮ್ಮನ್ನ ನೂಕುತ್ತಿದೆ. ಸರ್ಕಾರಕ್ಕೆ ಕಿಂಚಿತ್ತಾದರು ಮನಸ್ಸಿದ್ದರೆ ವಲಸಿಗರ ಈ ವರ್ತನೆಯನ್ನು ಹದ್ದುಬಸ್ತಿನಲ್ಲಿ ಇಡುವತ್ತ ಗಮನ ಹರಿಸಬೇಕು.

ಈ ಕೇಂದ್ರ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಿಂದಿ ಹೇರಿಕೆ ಮಾಡುವುದರ ಮೂಲಕ ಕನ್ನಡಿಗರನ್ನ ದ್ವಿತಿಯ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಸಹ ಇದೆ ಹಾದಿಯನ್ನು ಅನುಸರಿಸುತ್ತಿರುವು ವಿಷಾದದ ಸಂಗತಿ.
ಪ್ರತಿಭಟನೆ, ಚಳುವಳಿಗಳ ಮೂಲಕ ಇಂದು ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಒದಗಿದೆ.

"ಕನ್ನಡದ ಬಗ್ಗೆಯ ನಮ್ಮ ಅಭಿಮಾನಕ್ಕೆ ಎರಡು ಮುಖ ಇದೆ. ಒಂದು ಭಾವನಾತ್ಮಕವಾದುದು. ಕನ್ನಡವನ್ನು ನಾವು ಕನ್ನಡ ತಾಯಿ, ಕನ್ನಡಮ್ಮ, ಭುವನೇಶ್ವರಿ ಎಂದೆನ್ನುತ್ತೇವೆ. ಭಾಷೆಯನ್ನು ನಮ್ಮ ಭಾವಸ್ಪಂದನಕ್ಕೆ, ಹಾಡಿಕೊಂಡು ಕುಣಿಯಲಿಕ್ಕೆ ಉಪಯೋಗಿಸುತ್ತೇವೆ. ಇನ್ನೊಂದು ನಮ್ಮ ಭಾಷೆಯಲ್ಲಿ ನಾವು ಆಲೋಚಿಸಲು, ತಿಳಿಸಲು, ವ್ಯವಹರಿಸಲು, ಜ್ಞಾನವನ್ನು ಶೇಖರಿಸಿ ಮುಂಬರುವ ಅನೇಕ ತಲೆಮಾರುಗಳಿಗೆ ಹಸ್ತಾಂತರಿಸಲು ಉಪಯೋಗಿಸುತ್ತೇವೆ. ಒಂದು ಬಗೆಯ ಉಪಯೋಗವನ್ನು ಭಾವೋಪಯೋಗವೆಂದು, ಇನ್ನೊಂದು ಬಗೆಯ ಉಪಯೋಗವನ್ನು ಲೋಕೋಪಯೋಗವೆಂದು ಕರೆಯುತ್ತೇವೆ. ಭಾಷೆಯ ಈ ಎರಡು ಬಗೆಯ ಉಪಯೋಗಗಳ ಸ್ಪಷ್ಟ ಅರಿವು ಇರದವನು ಭಾಷೆಯ ಬಗ್ಗೆ ಅಂಧಾಭಿಮಾನಿಯಾಗುತ್ತಾನೆ. ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ."
(ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹೊಸ ವಿಚಾರಗಳು ಪುಸ್ತಕದಿಂದ)

ಪೂಚಂತೆಯವರ ಮಾತುಗಳಲ್ಲಿ ತುಂಬಾನೇ ಅರ್ಥವಿದೆ. ಆ ವೆಬ್ ಸೈಟಿನಲ್ಲಿ ಕನ್ನಡ ಇಲ್ಲ, ಈ ವೆಬ್ ಸೈಟಿನಲ್ಲಿ ಬರೇ ಇಂಗ್ಲಿಷ್ ಹಿಂದಿಯನ್ನೇ ತುಂಬಿದ್ದಾರೆ ಎಂದು ಬೊಬ್ಬೆ ಹೊಡೆಯುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಲಭ್ಯವಿರುವಾಗ ಅದೆಷ್ಟು ಜನರು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಅನ್ನು ಕನ್ನಡದಲ್ಲಿ ಬಳಸುತ್ತಿದ್ದೀವಿ? ಒಂದು ಭಾಷೆ  ಲೋಕೋಪಯೋಗಿಯಾಗಿ ಬಳಕೆಯಾಗದೆ ಹೊರತು ಎಂದಿಗೂ ಬೆಳೆಯಲಾರದು. ಇನ್ನಾದರೂ ನಾವು ಕನ್ನಡವನ್ನು ಹೆಚ್ಚು ಲೋಕೋಪಯೋಗಿ ಮಾಡುವತ್ತ ಸಾಗಬೇಕಿದೆ.