Tuesday, 6 December 2016

ಗುಡ್ಡೆ ಬಸವ | ಸಣ್ಣ ಕತೆ | ಗಿರೀಶ್ ಬಿ ಕುಮಾರ್

ಗುಡ್ಡೆ ಬಸವ

ಆಫೀಸಿಗೆ ರಜೆ ಹಾಕಿ ಸುಮಾರು ದಿನಗಳ ನಂತರ ನಾನು ನನ್ನ ಹುಟ್ಟೂರಿಗೆ ಬಂದಿದ್ದೆ. ಇದೇ ಖುಷಿಯಲ್ಲಿ ನಮ್ಮಜ್ಜಿ ಕೋಳಿ ಸಾರು ರಾಗಿ ಮುದ್ದೆ ಮಾಡಿ ಊಟಕ್ಕೆ ಬಡಿಸಿ ಮಂಚದ ಮೇಲೆ ಕುಳಿತ್ತಿದ್ದರು. ನಾನು ಒಂದೊಂದೆ ತುತ್ತನ್ನ ಸವಿಯುತ್ತ ಊಟ ಮಾಡುತ್ತಿದ್ದೆ. ಅದೇ ಸಮಯಕ್ಕೆ ಹೊರಗಿನಿಂದ ಯಾರೋ ನನ್ನ ಹೆಸರನ್ನು ಕೂಗಿದ ಹಾಗೆ ಕೇಳಿಸಿತು. ಯಾರು ಕೂಗುತ್ತಿದ್ದಾರೆ ನೋಡೋಣವೆಂದು ನಾನು ಎದ್ದು ಹೊರಗೆ ಬರುವುದರಲ್ಲಿದ್ದೆ ಅಷ್ಟರಲ್ಲಿ ನಮ್ಮಜ್ಜಿ "ಅದ್ಯಾರು ಅಂತ ನಾನು ನೋಡ್ತಿನಿ, ನೀನು ಊಟ ಮಾಡು" ಎಂದು ಹೇಳಿ ಹೊರಗೆ ಬಂದರು. ಕೋಳಿ ಸಾರು ಬಿಟ್ಟು ಬರಲು ಮನಸ್ಸಿಲ್ಲದ ನಾನು ಅಲ್ಲೆ ಊಟ ಮುಂದುವರೆಸಿದೆ.

ಹೊರಗೆ ನಮ್ಮಜ್ಜಿ ಜೊತೆ ಯಾರೋ ಏರು ಧ್ವನಿಯಲ್ಲಿ ಮಾತನಾಡುತ್ತಿರುವುದು ಕೇಳಿಸುತ್ತಿತ್ತು ಆದರೆ ಏನು ಮಾತು ಎಂದು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ಆ ಧ್ವನಿ ಕೇಳಿದರೆ ಅದು ನಮ್ಮ ಮನೆ ಪಕ್ಕದ ಮನೆಯ ಶಂಕ್ರಣ್ಣನ ಧ್ವನಿಯೆಂದು ತಿಳಿಯುತ್ತಿತ್ತು.  ಹೊರಗೆ ಪಡಸಾಲೆಯಲ್ಲಿ ನಮ್ಮಜ್ಜಿ 'ಅವ್ನು ಇವಾಗ ಬೆಂಗ್ಳೂರಿಂದ ಬಂದು ಊಟ ಮಾಡ್ತಾವ್ನೆ, ಅಮ್ಯಾಲೆ ಬತ್ತನೆ ಇರು' ಎಂದು ಶಂಕ್ರಣ್ಣನಿಗೆ ಹೇಳುತ್ತಿರುವು ಕೇಳಿಸಿತು ಅಷ್ಟರಲ್ಲಿ ಏನು ವಿಷಯ ಕೇಳೋಣವೆಂದು ಊಟ ಅರ್ಧಕ್ಕೆ ನಿಲ್ಲಿಸಿ ಹೊರಗೆ ಬಂದ ನಾನು
"ಏನ್ ಶಂಕ್ರಣ್ಣ ಏನ್ ಸಮಾಚಾರ" ಎಂದು ಕೇಳಿದೆ.

"ನೀವ್ ಪ್ಯಾಟೆಯಿಂದ ಬಂದಿದೀರ ಅಂತ ಗೊತ್ತಾಯ್ತು ಅದ್ಕೆ ನೋಡ್ಕೊಂಡು ಹೋಗುಮ ಅಂತ ಬಂದೆ" ಎಂದು ಶಂಕ್ರಣ್ಣ ಹೇಳಿದ. ಆದರೆ ಆತನನ್ನು ಗಮನಿಸಿದರೆ ಬರೇ ನನ್ನನ್ನು ನೋಡಿಕೊಂಡು ಹೋಗಲು ಬಂದಿರುವವನ ಹಾಗೆ ಕಾಣಿಸುತ್ತಿರಲ್ಲ ಬೇರ ಏನೋ ಹೇಳಲು ಚಡಪಡಿಸುತ್ತಿರುವ ಹಾಗೆ ಕಾಣಿಸಿತು. ಇದನ್ನು ತಿಳಿದ ನಾನು "ಅದೇನ್ ಹೇಳು ಶಂಕ್ರಣ್ಣ ನಾಚ್ಕೆ ಯಾಕೆ?" ಎಂದೆ.

ನಮ್ಮಜ್ಜಿ ಅಲ್ಲೆ ನಿಂತುಕೊಂಡಿದ್ದರಿಂದಲೋ ಏನೋ ಶಂಕ್ರಣ್ಣ ಮಾತನಾಡಲು ಹಿಂಜರಿಯುತ್ತಿದ್ದ. ನಾನು ಹೀಗೆ ಒಮ್ಮೆ ಶಂಕ್ರಣ್ಣನ ಜೊತೆ ನಮ್ಮೂರಿನ ಬೆಟ್ಟ ಹತ್ತಲು ಹೋಗಿ ಮುಳ್ಳು ಚುಚ್ಚಿಸಿಕೊಂಡು ಬಂದಿದ್ದೆ. ಇದಕ್ಕೆ ನಮ್ಮಜ್ಜಿ "ಮಗಿನ ಬೆಟ್ಟುಕ್ ಕರ್ಕೊಂಡೋಗಿ ಮುಳ್ಳು ಚುಚ್ಚಿಸ್ಕೊಂಡು ಬಂದಿದೀಯ" ಎಂದು ಶಂಕ್ರಣ್ಣನಿಗೆ ಬೈದಿದ್ದರು ಅದಕ್ಕಾಗಿ ಅವನು ಅಜ್ಜಿ ಮುಂದೆ ಏನಾದರೂ ಹೇಳಬೇಕಾದರೆ ಹಿಂಜರಿಯುತ್ತಿದ್ದ.

"ಅದನ್ ಕೇಳ್ಕೊಂಡ್ ಬಂದು ಊಟ ಮಾಡು" ಎಂದು ಹೇಳಿ ಅಜ್ಜಿ ಮನೆಯೊಳಗೆ ಹೋದರು. ಅವರು ಒಳ ಹೋಗುತ್ತಿದ್ದಂತೆ ಇತ್ತ ಶಂಕ್ರಣ್ಣ "ಅಯ್ಯ, ತಲೆ ಬರುಡೆ ತವ ಗಾಯ ಮಾಡ್ಕೊಂಡು ತಿರುಗ್ತಿತ್ತಲ್ಲ ಗುಡ್ಡೆ ಬಸವ ಅದು ಇವತ್ತು ಮಾರಿಗುಡಿ ಬೈಲಲ್ಲಿ ಸತ್ತೊದಂಗೆ ಬಿದ್ದದೆ. ಅದ್ನೆ ಹೇಳುಮ ಅಂತೆ ಬಂದೆ" ಅಂದ. 

ಕಳೆದ ಬಾರಿ ಸುಮಾರು ಐದಾರು ತಿಂಗಳ ಹಿಂದೆ ನಾನು ಊರಿಗೆ ಬಂದಿದ್ದಾಗ ನಾನು ಶಂಕ್ರಣ್ಣ ಸೇರಿಕೊಂಡು ಈ ಬಸವನನ್ನ ಕಟ್ಟಿ ಎಳೆದುಕೊಂಡೊಗಿ ಪಶುವೈದ್ಯ ಆಸ್ಪತ್ರೆಯಲ್ಲಿ ಕೊಂಬಿನ ಬಳಿ ಅದಕ್ಕಾಗಿರುವ ಗಾಯಕ್ಕೆ ಒಂದಿಷ್ಟು ಔಷದ ಹಾಕಿಸಿ ಉಪಚಾರ ಮಾಡಿದ್ದೆವು. 

ನಮ್ಮೂರಿನ ಗುಡ್ಡದ ಮೇಲಿರುವ ದೇವರಿನ ಹೆಸರಲ್ಲಿ ಬಿಟ್ಟಿರುವ ಈ ಬಸವನನ್ನು ನಮ್ಮೂರಿನ ಜನರು "ಗುಡ್ಡೆ  ಬಸವ" ಎಂದು ಕರೆಯುತ್ತಿದ್ದರು. "ಬಸವ ಬಿಡುವುದು" ಎನ್ನುವುದು ಒಂದು ರೀತಿಯ ಸಂಪ್ರದಾಯ. ಸಣ್ಣ ವಯಸ್ಸಿನ ಒಂದು ಹೋರಿಯನ್ನು  ದೇವರ ಹೆಸರಿನಲ್ಲಿ ಊರೂರು ತಿರುಗಲು ಬಿಡುತ್ತಾರೆ. ಹೀಗೆ ಊರೂರು ತಿರುಗಿ ಸಿಕ್ಕ ಸಿಕ್ಕ ಹೊಲ ಗದ್ದೆಗಳಲ್ಲಿ ಮೇವು ಸಂಪಾದಿಸಿ ಬದುಕುವ ಈ ಹಸುವನ್ನು ಬಸವ ಎಂದು ಕರೆಯುತ್ತಾರೆ. ಹೀಗೆ ನಮ್ಮೂರಿನ ಗುಡ್ಡದ ಮೇಲಿರುವ ದೇವರಿಗೆ ಬಿಟ್ಟಿರುವ ಬಸವನೇ "ಗುಡ್ಡೆ ಬಸವ". ಈ ಬಸವಗಳಿಂದ ಯಾರಿಗೂ ಏನು ಉಪಯೋಗವಿಲ್ಲ, ರಾತ್ರಿ ಸಮಯದಲ್ಲಿ ದೇವರು ಆ ಬಸವನ ಮೇಲೆ ಸಂಚಾರ ಮಾಡುತ್ತಾನೆ ಎಂಬ ನಂಬಿಕೆಯಿಂದ ಜನರು ಹೀಗೆ ಒಂದೊಂದು ದೇವರ ಹೆಸರಲ್ಲಿ ಒಂದೊಂದು ಬಸವ ಬಿಡುತ್ತಾರೆ.

ಕಳೆದ ಹಲವಾರು ವರ್ಷಗಳಿಂದ ಗುಡ್ಡೆ ಬಸವ ಅಲ್ಲಿ ಇಲ್ಲಿ ತಿಂದು ಕಟ್ಟು ಮಸ್ತಾದ ಮೈ ಬೆಳಸಿಕೊಂಡು ಆರಾಮವಾಗಿತ್ತು. ಈ ಗುಡ್ಡೆ ಬಸವನಿಗೆ ಕಳೆದ ಒಂದು ವರುಷದಿಂದ ತಲೆಯ ಮೇಲೆ ಎರಡು ಕೊಂಬುಗಳ ನಡುವೆ ಸಣ್ಣ ಗಾಯವಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ಇವಾಗ ಆ ಗಾಯ ಕೊಳೆತು ದೊಡ್ಡದಾಗಿ ಹುಳುಗಳು ಕಾಣಿಸುತ್ತಿದ್ದವು. ಅದಕ್ಕಾಗಿಯೇ ಕಳೆದ ಬಾರಿ ನಾವು ಗಾಯಕ್ಕೆ ಸ್ಪಲ್ಪ ಔಷದ ಹಾಕಿಸಿದ್ದೆವು. ಇಷ್ಟೆಲ್ಲಾ ಕಾರಣ ಇದ್ದುದ್ದರಿಂದಲೇ ನಾನು ಬೆಂಗಳೂರಿನಿಂದ ಬಂದಿರುವ ವಿಷಯ ತಿಳಿದ ಶಂಕ್ರಣ್ಣ ಗುಡ್ಡೆ ಬಸವನ ಬಗ್ಗೆ ತಿಳಿಸಲು ನಮ್ಮ ಮನೆಯ ಹತ್ತಿರ ಬಂದಿದ್ದ.

"ನಡಿರಿ ಅಯ್ಯ ಮಾರಿಗುಡಿ ಬೈಲಿಗೆ ಹೊಗಿದ್ದು ಬರುಮ" ಎಂದು ಶಂಕ್ರಣ್ಣ ನನ್ನನ್ನು ಕರೆದ.
ಅದಕ್ಕೆ ನಾನು, "ಊಟ ಮಾಡ್ಕೊಂಡು ಹೋಗಣ, ನೀನು ಬಾ ಊಟ ಮಾಡು" ಎಂದು ಕರೆದೆ. ಅದಕ್ಕವನು ಈಗಾಗಲೇ ನನ್ನದು ಊಟವಾಗಿದೆ ಎಂದ ಹೇಳಿ ನಾನು ಎಷ್ಟು ಕರೆದರೂ ಊಟ ಮಾಡಲು ಒಪ್ಪಲೇ ಇಲ್ಲ. "ನಿಮ್ಯಾಲೆ ಆಣೆಗೂ ನಂದು ಊಟ ಆಗೈತೆ ಕಣ್ರಯ್ಯ" ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿಬಿಟ್ಟ.

ನಾನು ಸರಸರೆನೆ ಊಟ ಮುಗಿಸಿ ನಮ್ಮ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿದ್ದ ಮಾರಿಗುಡಿ ಬೈಲಿನ ಕಡೆಗೆ ಶಂಕ್ರಣ್ಣನ ಜೊತೆ ಹೊರಟೆ. ನಾವು ಬಯಲನ್ನು ತಲುಪುತ್ತಿದ್ದಾಗೆ ಬಯಲಿನ ಒಂದು ಮೂಲೆಯಲ್ಲಿ ಮಾರಿಗುಡಿಗೆ ಸ್ವಲ್ಪ ಹತ್ತಿರದಲ್ಲಿ ಗುಡ್ಡೆ ಬಸವ ಮಲಗಿರುವುದು ಕಾಣಿಸಿತು. ದೂರದಿಂದ ನೋಡುತ್ತಿದ್ದ ನಮಗೆ ಈ ಬಸವ ಆಗಾಗ್ಗೆ ತನ್ನ ಕಿವಿಯನ್ನು ಬಡಿದುಕೊಳ್ಳುವುದು ಕಾಣಿಸಿದ್ದು ಬಿಟ್ಟರೆ ದೇಹದ ಯಾವ ಭಾಗದಲ್ಲೂ ಸ್ವಲ್ಪವೂ ಚಲನೆ ಕಾಣಿಸಲಿಲ್ಲ. ಕಿವಿಯ ಚಲನೆ ಇಲ್ಲದಿದ್ದರೆ ಈ ಬಸವ ಸತ್ತಿದೆ ಎಂದು ದೂರದಿಂದ ನೋಡಿದ ಯಾರು ಬೇಕಾದರೂ ಹೇಳ ಬಹುದಿತ್ತು. 

ಬಸವ ಮಲಗಿದ್ದ ಜಾಗಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಮುದುಕ ಮರದ ನೆರಳಿನಲ್ಲಿ ಕುಳಿತುಕೊಂಡು ಬಸವನ ಕಡೆಗೆ ಆಗಾಗ್ಗೆ ಏನನ್ನೋ ಎಸೆಯುತ್ತಿದ್ದ. ಇದನ್ನು ನೋಡಿದ ನಾನು ತಕ್ಷಣ ಅಲ್ಲೆ ನಿಂತುಕೊಂಡೆ. ಶಂಕ್ರಣ್ಣ ಏನನ್ನೊ ಒಬ್ಬನೆ ಮಾತನಾಡುತ್ತ  ಮುದುಕನ ಕಡೆಗೆ ಹೊರಟ. ನಾನು ಈ ಮುದುಕ ಹೀಗೆಕೆ‌ ಮಾಡುತ್ತಿದ್ದಾನೆ ಎಂದು ಸೂಕ್ಷವಾಗಿ ಗಮನಿಸುತ್ತ ನಿಂತುಕೊಂಡೆ‌. ಹಲವಾರು ಕಾಗೆಗಳು ಬಸವನ ತಲೆಯ ಮೇಲೆ ಕುಳಿತು ಗಾಯವನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಗಾಯದಲ್ಲಿರುವ ಹುಳುಗಳು ಹಾಗೂ ಗಾಯದ ಸುತ್ತಲಿನ ಮಾಂಸವನ್ನು ಹೆಕ್ಕಿಕೊಂಡು ಹೋಗುತ್ತಿದ್ದವು. ಕೆಲವು ಕಾಗೆಗಳಂತೂ ಬಸವನ ಬಾಲ ಮತ್ತು ಕಾಲುಗಳ ಮೇಲೆಲ್ಲಾ ಎರಗಿ ಮನಬಂದಂತೆ ಕುಕ್ಕುತಿದ್ದವು. ಇಷ್ಟೆಲ್ಲಾ ಆಗುತ್ತಿದರು ಬಸವ ಮಾತ್ರ ಕಿವಿಯನ್ನು ಆಗಾಗ್ಗೆ ಬಡಿಯುತ್ತ ಕೆಲವು ಪುಕ್ಕಲು ಕಾಗೆಗಳನ್ನು ಓಡಿಸಲು ಮಾತ್ರ ಆಗುತ್ತಿತ್ತು ಉಳಿದಂತೆ ಕೆಲವು ಹಠಮಾರಿ ಕಾಗೆಗಳಂತು ಒಂದಷ್ಟು ಮಾಂಸದ ತುಣುಕಿಲ್ಲದೆ ಅಲ್ಲಿಂದ ಕದಡುತ್ತಿರಲಿಲ್ಲ. ಈ ಕಾಗೆಗಳನ್ನು ಓಡಿಸಲೆಂದೆ ಆ ಮುದುಕ ಮರದ ಕಡೆಯಿಂದ ಆಗಾಗ್ಗೆ ಕಲ್ಲುಗಳನ್ನು ಬಸವ ಮಲಗಿರುವ ಕಡೆಗೆ ಎಸೆಯುತ್ತಿದ್ದ. 

ಶಂಕ್ರಣ್ಣ ಹೇಳಿದ ಹಾಗೆ ಬಸವ ಕಳೆದ ಕೆಲವು ದಿನಗಳಿಂದ ಏನನ್ನೂ ತಿನ್ನದೆ ಬಯಲಿನಲ್ಲೆ ಮಲಗಿ ತುಂಬಾ ಸೊರಗಿಹೊಗಿತ್ತು. ಹಾಗಾಗಿಯೇ ಕಾಗೆಗಳು ಇಷ್ಟು ಕ್ರೂರವಾಗಿ ವರ್ತಿಸುತ್ತಿದ್ದರು ಸಹ ಪ್ರತಿರೋಧ ಒಡ್ಡದೇ ಸುಮ್ಮನೆ ಮಲಗಿತ್ತು. ಬಹುಶಃ ನನಗೆ ಕ್ರೂರವಾಗಿ ಕಂಡ ಈ ಕಾಗೆಗಳು ಬಸವನಿಗೆ ಈ ಲೋಕದಿಂದ ತನ್ನನ್ನು ಕರೆದುಕೊಂದು ಹೋಗಲು ಬಂದಿರುವ ಯಮನಾಗಿಯೋ ಅಥವಾ ದೇವರಾಗಿಯೋ ಕಂಡಿರಬಹುದು.


ಕಣ್ಣ ಮುಂದೆ ನಡೆಯುತ್ತಿದ್ದ ಕ್ರೂರ ಪ್ರಪಂಚದ ಆಟಗಳನ್ನ ನೋಡುತ್ತ ನಿಂತಿದ್ದ ನನಗೆ, "ಅಯ್ಯಾ ಅಲ್ಲೇನ್ ಮಾಡ್ತಿದೀರ? ಚಾಮಯ್ಯ ಕರಿತಾವ್ನೆ ಬನ್ನಿ ಇತ್ಲಾಗೆ" ಅಂತ ಶಂಕ್ರಣ್ಣ ಮುದುಕ ಕುಳಿತಿದ್ದ ಮರದ ಕಡೆಯಿಂದ ಕೂಗುತ್ತಿದ್ದದ್ದ ಸಣ್ಣದಾಗಿ ಕೇಳಿಸತೊಡಗಿತು. ಶಂಕ್ರಣ್ಣನ ಕೂಗಿಗೆ ಪ್ರತಿಕ್ರಿಯೆಯಾಗಿ ನನ್ನ ಕಾಲುಗಳು ಮರದ ಕಡೆಗೆ ನನನ್ನು ಕರೆದುಕೊಂಡು ಹೋದವು. 

ಮರದ ಬಳಿ ಬರುತ್ತಿದ್ದಹಾಗೆ ಅಲ್ಲಿರುವ ಮುದುಕ ಚಾಮಯ್ಯನೆಂದು ನನಗೆ ಸ್ಪಷ್ಟವಾಯಿತು.   ಇವನೊಬ್ಬ ರಿಟೈರ್ಡ್ ಸರ್ಕಾರಿ ನೌಕರ. ನಮ್ಮೂರಿನ ಗುಡ್ಡದ ಸುತ್ತ ಮುತ್ತಲು ಹಬ್ಬಿಕೊಂಡಿರುವ ಕಾಡನ್ನು ನೋಡಿಕೊಳ್ಳುತ್ತಿದ್ದ ಫಾರೆಸ್ಟ್ ಗಾರ್ಡ್ ಆಗಿ ಸುಮಾರು ವರುಷಗಳ ಕಾಲ ಕೆಲಸ ಮಾಡಿದ್ದ. ಆತನ ಕಾಲಕ್ಕೆ ಹುಲಿಯಿಂದ ಒಬ್ಬಳು ಹೆಂಗಸನ್ನು ರಕ್ಷಿಸಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದ. ಸರ್ಕಾರಿ ಸೇವೆ ಮುಗಿದ ನಂತರ ಹೆಂಡತಿ ಮಕ್ಕಳು ಇಲ್ಲದ ಈತ 'ಮನೆ ಮನೆ ಮುದ್ದೆ ಮಾರಿಗುಡಿ ನಿದ್ದೆ' ಎಂಬಂತೆ ಕಾಲ ಕಳೆಯುತ್ತಿದ್ದ. ಚಾಮಯ್ಯನಿಗೆ ವಯಸ್ಸಾಗಿ ಬಡಕಲಾಗಿದ್ದರಿಂದ ಹಾಗೂ ನಾನು ಅವನನ್ನು ನೋಡಿ ತುಂಬಾ ದಿನಗಳಾಗಿದ್ದರಿಂದ ಮೊದ ಮೊದಲು ಆತನ ಗುರುತ್ತೆ ಸಿಕ್ಕಿರಲಿಲ್ಲ. ಕಳೆದ ಬಾರಿ ನಾನು ಊರಿಗೆ ಬಂದಾಗಲೂ ಚಾಮಯ್ಯ ಕಾಣಿಸಿರಲಿಲ್ಲ ಈ ಬಗ್ಗೆ ಶಂಕ್ರಣ್ಣನನ್ನು ಕೇಳಿದ್ದಕ್ಕೆ ಅವನು "ನಡ್ದಾಡೊ ದೇವುಕ್ಕು ದೇವರ್ಗೂ ನೆಲೆವುಂಟೆ ಅಯ್ಯ?" ಎಂದು ಹೇಳಿ ಸುಮ್ಮನಾಗಿದ್ದ.
ನಾನು ಚಾಮಯ್ಯನ ಹತ್ತಿರಕ್ಕೆ ಹೋದಾಗ ಅವನು ಸಹ ನನ್ನ ಗುರುತು ಹಿಡಿಯಲಿಲ್ಲ. ಹಾಗೆಯೇ "ಯಾರೋ ಇವ್ರು ಶಂಕ್ರ ಪ್ಯಾಟೆಯೋರ್ ಕಂಡಂಗ್ ಕಾಣ್ತಾವ್ರೆ. ಯಾರ್ ಬುದ್ಧಿ ನೀವು?" ಎಂದು ನನ್ನನ್ನೆ ಕೇಳಿದ.
ನಾನು ಏನು ಉತ್ತರ ನೀಡದೆ ಬಸವನನ್ನು ನೋಡುತ್ತಾ ನಿಂತಿದ್ದೆ.
"ಮ್ಯಾಗ್ಳಟ್ಟಿ ಅಯ್ಯರ ಮ್ಮೊಮ್ಮಗ ಕಣಯ್ಯ" ಎಂದು ಶಂಕ್ರಣ್ಣ ಚಾಮಯ್ಯನ ಪ್ರಶ್ನೆಗೆ ಉತ್ತರಿಸಿದ. 
"ಹೋ ಸಣ್ಣಯ್ಯೋರು ಹೆಂಗಿದಿರಿ?" ಎಂದು ಚಾಮಯ್ಯ ಮತ್ತೆ ನನ್ನನ್ನು ಕೇಳಿದ. 
"ಚೆನ್ನಾಗಿವ್ನಿ" ಎಂದೆ ನಾನು.
"ಇವಾಗ ಯಾವ್ ಕಡೆ ಇರೋದು?"
"ಬೆಂಗ್ಳೂರ್ ಪ್ಯಾಟೆ"
"ಹೊ ಯಾವ್ ದೇಸಾನೋ ಏನೋ, ಎಲ್ಲೋ ಒಂತಾವ್ ಚೆನ್ನಾಗಿದ್ರೆ ಅಷ್ಟೆ ಸಾಕು" ಎಂದು ಹೇಳುತ್ತಾ ಚಾಮಯ್ಯ ಒಂದು ಕಲ್ಲು ತೆಗೆದುಕೊಂಡು ಬಸವನ ಕಡೆಗೆ ಎಸೆದ.‌

ನಾವು ಮೂವರು ಅಲ್ಲೆ ಮರದ ನೆರಳಿನಲ್ಲಿ ಮಾತನಾಡುತ್ತ ಕುಳಿತಿರುವಾಗಲೆ ಒಬ್ಬ ಹೆಂಗಸು  ತಟ್ಟೆಯಲ್ಲಿ ಹರಿಶಿನ ಕುಂಕುಮ ಹೂವು ಹೀಗೆ ಹಲವಾರು ಪೂಜೆ ಸಾಮಾನುಗಳನ್ನು ತಂದು ಬಸವನಿಗೆ ಪೂಜೆ ಮಾಡಲು ಆರಂಭಿಸಿದಳು. ಇದನ್ನು ನಾನು ಮತ್ತು ಶಂಕ್ರಣ್ಣ ಸುಮ್ಮನೆ ಗಮನಿಸುತ್ತ ನಿಂತಿದ್ದೆವು. ಚಾಮಯ್ಯ ಮಾತ್ರ ಇದ್ದಕ್ಕಿದ್ದ ಹಾಗೆ ಆ ಹೆಂಗಸನ್ನು ಉದ್ಧೇಶಿಸಿ ಏರು ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದನು. 

"ದೇವ್ರು ದೇವ್ರು ಅಂತೀರಲ್ಲ ಎಲ್ರಮ್ಮ ನಿಮ್ ದೇವ್ರು?"
ಚಾಮಯ್ಯ ಹೀಗೆ ಹೇಳುತ್ತಿದ್ದಾಗೆ ಆ ಹೆಂಗಸು ನಮ್ಮ ಕಡೆಗೆ ಒಮ್ಮೆ ನೋಡಿ ಮತ್ತೆ ಬಸವನ ಹಣೆಗೆ ಹರಿಶಿನ ಕುಂಕುಮ ಹಚ್ಚುತ್ತ ತನ್ನ ಪೂಜೆಯನ್ನು ಮುಂದುವರೆಸಿದಳು. 

ಚಾಮಯ್ಯ ಮತ್ತೆ ಮಾತು ಶುರು ಮಾಡಿದ.
"ಎಲ್ಲೋದ್ನಮ್ಮ ಗುಡ್ಡುದ್ ದೇವ್ರು? ಮನುಗ್ಬುಟ್ಟವ್ನ?"
"ಅವತ್ತು ಮೆರೆದಾಡ್ಕೊಂಡು ದೇವ್ರು ಹೆಸ್ರು ಹೇಳ್ಕೊಂಡು ಈ ಬಸುವನ್ನ ಬುಟ್ರಲ್ಲ, ಇವತ್ತು ಯಾವನಾರ ಅನ್ನ ತಿನ್ನೊ ಮರ್ಯಾದಸ್ಥ ಇತ್ತಾಗ್ ಬಂದು ನೋಡೌವ್ನ?"

"ನೀವ್ ಹೆಂಗುಸ್ರು ಬತ್ತಿರಿ, ಹರಿಶ್ನ ಕುಂಕುಮ ಬಳ್ದು ಪೂಜೆ ಪುರುಸ್ಕಾರ ಮಾಡ್ತಿರಿ. ಏನ್ ಬತ್ತು ಸುಕ?ಹಿಂಗೆಲ್ಲಾ ಮಾಡುದ್ರೆ ಬಸುನ್ ಗಾಯ ವಾಸಿ ಮಾಡಾನೇ ನಿಮ್ ದೇವ್ರು?"

"ಆ ಜಾತಿಗ್ ಒಂದ್ ದೇವ್ರು ಈ ಜಾತಿಗ್ ಒಂದ್ ದೇವ್ರು ಅಂತ ಇರೋ ಬರೋ ದೇವುರ್ನೆಲ್ಲಾ ನೀವೇ ಹುಟ್ಟುಸುದ್ರಿ. ಈಗ ಆ ದೇವ್ರು ತಾನೆ ಏನ್ ಮಾಡಾನು! ನಿಮ್ ಜಾತಿಗೊಳ್ ಕಿತ್ತಾಟನೇ ನೋಡನೋ?, ಬಡ ಬಗ್ರು ಕಷ್ಟನೇ ನೋಡನೋ?, ಈ ಪ್ರಾಣಿ ಪಕ್ಷಿಗೊಳ್ ಗೋಳ್ ನೋಡನೋ?". 
ಇಷ್ಟು ಹೇಳಿ ಚಾಮಯ್ಯ ಸುಮ್ಮನೆ ಕುಳಿತುಬಿಟ್ಟ. ಆ ಹೆಂಗಸಂತು ಚಾಮಯ್ಯನ ಯಾವ ಮಾತಿಗೂ ಕಿವಿಗೊಡದೆ ತನ್ನ ಪೂಜೆ ಕಾರ್ಯಕ್ರಮದಲ್ಲಿ ಮುಳುಗಿ ಹೋಗಿದ್ದಳು. 

ಚಾಮಯ್ಯ ಹೀಗೆ ಒಂದೇ ಸಮನೆ ಯಗ್ಗಾ ಮುಗ್ಗಾ ಮಾತನಾಡುತ್ತಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾವು ಚಿಕ್ಕವರಿದ್ದಾಗ ಕರಡಿ ಕತೆ, ಹುಲಿ ಕತೆ ಹೇಳಿ ನಮ್ಮನ್ನು ರಂಜಿಸುತ್ತಿದ್ದ ಚಾಮಯ್ಯನಿಗೂ ಈವಾಗ ಇಲ್ಲಿ ಮುಕ್ಕೋಟಿ ದೇವತೆಗಳೆಲ್ಲಾ ನರ ಮಾನವನ ಸೃಷ್ಟಿ ಎಂದು  ಹೇಳುತ್ತಿರುವ ಈ ಚಾಮಯ್ಯನಿಗೂ ಬಹಳ ವ್ಯತ್ಯಾಸವಿದೆ ಎನಿಸಿತು. 

ಗುಡ್ಡದ ಮೇಲಿನ ದೇವರ ಒಕ್ಕಲಿಗೆ ಸೇರಿದ ಜಾತಿಯವರು ದೇವರ ಜಾತ್ರೆ ನಡೆಸುವ ವಿಚಾರಕ್ಕೆ ಕಿತ್ತಾಡಿಕೊಂಡು ಎರಡು ಗುಂಪುಗಳಾಗಿ ಹೊಡೆದು ಹೋಗಿದ್ದರಿಂದ ಕಳೆದ ಕೆಲವು ವರ್ಷಗಳಿಂದ ನಮ್ಮೂರಿನಲ್ಲಿ ಜಾತ್ರೆ ನಿಂತುಹೋಗಿತ್ತು. ಈ ಜಗಳದ ದೆಸೆಯಿಂದಾಗಿ ಈ ಎರಡೂ ಗುಂಪಿನವರು ದೇವರಿಗೆ ಬಿಟ್ಟಿದ್ದ ಬಸವ ಗಾಯಗೊಂಡಿದ್ದರು ಸಹ ಅದನ್ನು ನೋಡಿಯೂ ನೋಡದವರಂತೆ ಇದ್ದು ಸರಿಯಾದ ಸಮಯದಲ್ಲಿ ಔಷದ ಕೊಡಿಸದೇ ಇದ್ದುದ್ದರಿಂದ ಈ ಗುಡ್ಡೆ ಬಸವನ ಗಾಯ ವಾಸಿ ಮಾಡಲಾಗದ ಹಂತಕ್ಕೆ ಬಂದಿತ್ತು. ದೇವರ ಒಕ್ಕಲಿನವರಿಗೇ ಬೇಡದ ಉಸಾಬರಿ ನಮಗೇಕೆ ಎಂದು ಊರಿನ ಜನರು ಸಹ ಬಸವನ ಕಡೆಗೆ ಮುಖ ಮಾಡಲಿಲ್ಲವಂತೆ ಹಾಗಾಗಿ ಹಲವು ಬಾರಿ ಚಾಮಯ್ಯನೇ ಆಸ್ಪತ್ರೆಯಲ್ಲಿ ಒಂದಿಷ್ಟು ಔಷಧಿ ಬೇಡಿಕೊಂಡು ತಂದು ಗಾಯಕ್ಕೆ ಹಾಕಿ ಉಪಚಾರ ಮಾಡಿದ್ದಾನೆ ಎಂದು ಶಂಕ್ರಣ್ಣ ನನಗೆ ತಿಳಿಸಿದ್ದ.



ಆ ಹೆಂಗಸು ಗಂಧದ ಕಡ್ಡಿ ಹಚ್ಚಿ ಗುಡ್ಡೆ ಬಸವನಿಗೆ ಪೂಜೆ ಮಾಡುತ್ತಿದ್ದಳು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಚಾಮಯ್ಯ ನಂತರ ಕಣ್ಣು ಮುಚ್ಚಿ ಏನೇನೋ ಗೊಣಗಲು ಶುರು ಮಾಡಿದ. ನನ್ನ ಕಿವಿಗಳು ಅರಳಿ ಚಾಮಯ್ಯನ ಧ್ವನಿಯನ್ನ ಆಲಿಸಲು ಹೆಣಗಾಡುತ್ತಿದ್ದವು. ಅಷ್ಟರಲ್ಲೇ ಚಾಮಯ್ಯನ ಧ್ವನಿ ಜೋರಾಯಿತು.

"ನಮ್ ದೇವ್ರು  ನಮ್ ದೇವ್ರು ಅಂತ ಮೊದ್ಲು ಎಲ್ಲಾ ಬಂದ್ರು. ಸಾಲ್ ಸಾಲಾಗ್ ಜನ ದಂಡೆತ್ಕೊಂಡ್ ಬಂದ್ರು. ಹಾರ ಗೆಜ್ಜೆ ಪೂಜೆ ಸಾಮಾನು ಎಲ್ಲನೂ ಒತ್ಕೊಂಡ್ ಬಂದ್ರು. ಸುತ್ಲೂ ಹತ್ತಳ್ಳಿಗೆ ಊಟ ಹಾಕ್ಸುದ್ರು. ಕುಣುದ್ರು ಕುಪ್ಪಳುಸುದ್ರು. ಅವನ್ಯಾವನ್ದೋ ಎಳೆ ಹಸ ಒಡ್ಕಬಂದ್ರು. ಇದೇ ನಮ್ ದೇವರ್ನ ಒತ್ಕೊಳೊ ಬಸವ ಅಂದ್ರು. ಗುಡ್ಡದ್ ದೇವ್ರು ಇದೆ ಅಂದ್ರು. ಎಲ್ಲಾ ಸೇರ್ಕೊಂಡು ಅದ್ಕೆ ಪೂಜೆ ಪುರುಸ್ಕಾರ ಮಾಡಿ ಕೊನೆಗೆ ಕಾಡಗ್ ಹಟ್ಟುದ್ರು".

"ಮನ್ಸನ್ ಬುಟ್ಟು ಎಲ್ಲಾರು ದೇವ್ರು ಇದ್ದನೆ?"

"ಈ ಬಸ್ವ ಹೋದ. ಸೀದ ಗುಡ್ಡುದ್ ಮ್ಯಾಲ್ ಗುಡಿತಕ್ ಓದ. ಉಡುಕ್ತಾ ಉಡುಕ್ತಾ, ಅಲ್ಲೆಲ್ಲಾ ಸುತ್ತಾ ಮುತ್ತಾ ಉಡುಕ್ತಾ ಅಂತ ಕಾಣ್ತದೆ. ಆ ದೇವ್ರು ಬಸುಂಗೆ ಕಂಡ್ನೋ ಏನೋ ನಾನಂತು ಕಾಣೆ. ಆ ಕಾಡಲ್ ತಿರ್ಗಿ ತಿರ್ಗಿ ಕೊನೆಗೆ ತಿರ್ಗ ಊರೊಳಕೆ ಒನಗೊಳ್ ತಕೆ ಬಂದ".

"ಅವ್ರೊಳ್ಗೆ ಇರೋ ದೇವುರ್ನ ಹುಡುಕ್ತೆ ಇರೋ ಈ ಜನ 'ನಡಿ ನಡಿ ಗುಡ್ಡುದ್ ಮ್ಯಾಕ್ ನಡಿ ನಮ್ ದೇವ್ರು ನಿನ್ ಮ್ಯಾಲೆ ಸಂಚಾರ ಮಾಡ್ಬೇಕು' ಅಂತ ಆ ಬಸ್ವುನ್ನ ತಿರ್ಗ ಗುಡಿತಕ್ ಅಟ್ಟುದ್ರು‌. ಈ ಬಸ್ವ ಮಾತ್ರ ತಿರ್ಗ ತಿರ್ಗ ಊರೊಳಕ್ ಬತ್ತನೇ ಇದ್ದ. ಕೊನೆಗೊಂದಿನ ಊರಲ್ಲೆ ಬಂದು ಸೇರ್ಕೊಂಡ".

"ಈ ಮೂರ್ಕಾಸುನ್ ಜನ ಇವ್ರ ಸೀಮೆಗಿಲ್ದಿರೋ ದೇವ್ರು ಸಂಚಾರ ಮಾಡ್ಲಿ ಅಂತ ಅವತ್ತು ಈ ಗುಡ್ಡೆ ಬಸ್ವುನ್ನ ತಂದು ಮೆರ್ಸುದ್ರು ಇವಾಗ ಇದ್ಕೆ ಗಾಯ ಆಗಿ ದಿಕ್ಕು ದೆಸೆ ಇಲ್ದೆ ಬಿದ್ದದೆ. ಅತ್ತಾಗೆ ಆ ದೇವ್ರು ಇದ್ನ ನೋಡ್ತಾಯಿಲ್ಲ ಇತ್ತಾಗೆ ಈ ಜನಗೊಳು ಕ್ಯಾರೆ ಅಂತ ಇಲ್ಲ".

ಇದನೆಲ್ಲಾ ಕೇಳುತ್ತಿದ್ದ ನಾನು ಬೇರೆ ಪ್ರಪಂಚದಲ್ಲಿ ಮುಳುಗಿರುವಂತೆ ಅನ್ನಿಸುತ್ತಿತ್ತು. "ಯೋ ಚಾಮಯ್ಯ" ಎಂದು ಶಂಕ್ರಣ್ಣ ಕರೆದದ್ದು ನನಗೆ ಕೇಳಿಸಿತು. ನಂತರ ಕಣ್ಣು ತೆರೆದು ನಮ್ಮ ಕಡೆಗೆ ನೋಡಿದ ಚಾಮಯ್ಯ ಎದ್ದು ನಿಂತುಕೊಂಡ  ಹಾಗೆಯೇ ಗುಡ್ಡೆ ಬಸವನಿಗೆ ಪೂಜೆ ಮಾಡುತ್ತಿದ್ದ ಹೆಂಗಸಿನ ಕಡೆಗೆ ನೋಡುತ್ತಾ

"ಮಾಡಿ ಮಾಡಿ ಪೂಜೆ ಮಾಡಿ. ಕಲ್ಲು ಮಣ್ಣು ಕಸ ಕಡ್ಡಿ ನಾಯಿ ನರಿಗೆಲ್ಲಾ ಪೂಜೆ ಮಾಡಿ".

" ಒಂದ್ ಮೂಕ್ ಪ್ರಾಣಿ ಉಳಿಸ್ಕೊಳಕ್ ಆಗ್ದಿರೋ ತಿರುಬೋಕುಗಳು ನೀವು. ಈಗ್ ಬಂದು ಪೂಜೆ ಪುರುಸ್ಕಾರ ಮಾಡುದ್ರೆ ಏನ್ ಆದದು?"

"ಕಾಗೆನ ಸನಿಮಾತ್ಮ ಅಂತಿರಲ್ಲ. ಆ ಸನಿಮಾತ್ಮ ನೀವೆ ಹುಟ್ಸುದ್ ದೇವ್ರೆ ಅಲ್ವೆ? ಈ ಬಸ್ವುನ್ನ ದೇವ್ರು ಅಂತ ಮೆರುಸ್ದೊರು ನೀವೆ ಅಲ್ವೆ? ಈಗ ಆ ಸನಿಮಾತ್ಮು ಬಂದು ಬಸ್ವುನ್ನ ತಿನ್ತಾವ್ನಲ್ಲ ಇದ್ನ ಯಾವ್ ದೇವ್ರುತಾವು ಏಳ್ಕೊಂಡಿರಿ?"

"ನಿಮ್ ಜಾತಿ ಧರ್ಮಗೊಳ್ನೆಲ್ಲಾ ತಿಪ್ಪೆಗ್ ಎಸಿರಿ. ನೀವ್ ಉಟ್ಸಿರೋ ದೇವ್ರ್ನೆಲ್ಲಾ ಬೀದಿಗ್ ಬಿಸಾಕಿ. ದುಡ್ಡು ಕಾಸು ಜಾತಿ ಧರ್ಮ ಅಂತ ಕಿತ್ತಾಡೊರ್ನೆಲ್ಲಾ ಕ್ಯಾಕರ್ಸಿ ಉಗ್ದು ಊರಿಂದ ಆಚ್ಗೆ ಅಟ್ಟಿ." ಎಂದು ಹೇಳುತ್ತಾ ಚಾಮಯ್ಯ ನಾವು ಬಂದ ದಾರಿಯ ಕಡೆಗೆ ಹೊರಟ.
"ಇದ್ಯಾಕಯ್ಯ ಒಂಟ್ಬುಟ್ಟೆ" ಎಂದು ಶಂಕ್ರಣ್ಣ  ಕರೆಯುತ್ತಿದ್ದರು ಚಾಮಯ್ಯ ತಿರುಗಿಯೂ ನೋಡದೆ ತನ್ನ ದಾರಿಯಲ್ಲಿ ಹೊರಟ.

ಚಾಮಯ್ಯ ಹೇಳಿದ ಮಾತುಗಳನ್ನು ನಾನು ನನ್ನದೇ ಆದ ಜ್ಞಾನ ಸಂಪತ್ತಿನಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಅಲ್ಲೆ ಕುಳಿತುಬಿಟ್ಟೆ. ಶಂಕ್ರಣ್ಣನಿಗೆ ನಾನು   ಏನನ್ನೋ ಯೋಚಿಸುತ್ತಿದ್ದೀನಿ ಎಂದು ತಿಳಿದಿರಬೇಕು ಆತ ನನ್ನನ್ನು ಮಾತನಾಡಿಸದೇ ಸುಮ್ಮನೇ ದೂರದಲ್ಲಿ ಕುಳಿತುಬಿಟ್ಟ. ಪೂಜೆ ಮುಗಿಸಿ ಹೆಂಗಸು ಗುಡ್ಡೆ ಬಸವನಿಗೆ ಅ್ವಲ್ಪ ದೂರದಲ್ಲಿ ಬಿಟ್ಟಿದ್ದ ತನ್ನ ಚಪ್ಪಲಿಗಳ ಕಡೆಗೆ ಹೋಗುತ್ತಿದ್ದಳು‌. ಹರಿಶಿನ ಕುಂಕುಮ ಬಳಿದುಕೊಂಡು ಜನರ ದೃಷ್ಟಿಯಲ್ಲಿ ದೇವರ ಪ್ರತಿರೂಪವಾಗಿದ್ದ ಗುಡ್ಡೆ ಬಸವನ ಮಾಂಸದ ರುಚಿ ನೋಡಲು ಹದ್ದು ಮತ್ತು ಕಾಗೆಗಳು ಆಕಾಶದಲ್ಲಿ ಹೊಂಚು ಹಾಕುತ್ತಾ ವೃತ್ತಾಕಾರದಲ್ಲಿ ಸುತ್ತುತ್ತಿದ್ದವು.

*****

ಪಟ ಕೃಪೆ: ಇಂಟರ್ನೆಟ್
ಈ ಪಟಗಳನ್ನು ಕೇವಲ ಸಾಂದರ್ಭಿಕ ಪಟಗಳನ್ನಾಗಿ ಬಳಸಿಕೊಳ್ಳಲಾಗಿದೆ.


Sunday, 18 September 2016

ನಾನು ಕಂಡಂತೆ ತಿಥಿ

ಈರೆಗೌಡ್ರು ಅವರು ಹುಟ್ಟಿ ಬೆಳೆದ ಹಳ್ಳಿಯ ಶುದ್ಧ ಜೀವನದ ಪ್ರಸಂಗಗಳನ್ನ ಕಥೆಯನ್ನಾಗಿಸಿದರೆ, ರಾಮ್ ರೆಡ್ಡಿಯವರು ಈ ಕಥೆಯನ್ನು ತೆರೆಯೆ ಮೇಲೆ ತಂದು ಪ್ರೇಕ್ಷಕ ಸಿನೆಮಾದಲ್ಲೇ ಮೈ ಮರೆಯುವಾಗೆ ಮಾಡಿದ್ದಾರೆ.

ಚಿತ್ರಕ್ಕೆ ಅನುಭವಿ ಕಲಾವಿದರನ್ನು ಬಿಟ್ಟು ಹಳ್ಳೆಯಲ್ಲೇ ವಾಸಿಸುವವರನ್ನು ಆಯ್ಕೆ ಮಾಡಿಕೊಂಡು ಅವರಿಂದ ಜನರು ಮೆಚ್ಚುವ ಹಾಗೆ ನಟನೆ ಮಾಡಿಸಿರುವುದು ಚಿತ್ರ ತಂಡದ ಒಳ್ಳೆಯ ಪ್ರಯತ್ನ. ಚಿತ್ರದ ಸಂಭಾಷಣೆಯಲ್ಲಿ ಒಂದೊಳ್ಳೆ ಗಟ್ಟಿತನವಿದೆ, ಪ್ರತೀ ಪಾತ್ರವು ನೂರಕ್ಕೆ ನೂರರಷ್ಟು ನೈಜತೆಯಿಂದ ಕೂಡಿದೆ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಸೆಂಚುರಿಗೌಡ, ಗಡ್ಡಪ್ಪ, ತಮ್ಮಣ್ಣ, ಅಭಿ ಎಲ್ಲರೂ ನಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಬಂದು ಹೋದ ಜನರಂತೆ ಕಾಣುತ್ತಾರೆ. ತಿಥಿ ನೋಡುತ್ತಿದ್ದರೆ ನನಗೆ ಒಂದು ಒಳ್ಳೆ ಕಾದಂಬರಿ ಓದಿದ ಹಾಗೆ ಅನ್ನಿಸುತ್ತದೆ. ಎಲ್ಲಾ ಕಾದಂಬರಿಗಳಲ್ಲೂ ಒಂದು ವಿಶೇಷ ಪಾತ್ರವಿರುವಂತೆ ತಿಥಿಯಲ್ಲಿ ನನಗೆ ಗಡ್ಡಪ್ಪನ ಪಾತ್ರ ತುಂಬಾನೆ ವಿಶಿಷ್ಟವಾಗಿ ಕಾಣುತ್ತದೆ.

ಇಲ್ಲಿ ಆರ್ಟ್ ಅಥವಾ ಕಮರ್ಷಿಯಲ್ ಸಿನೆಮಾವೆಂದು ವರ್ಗಿಕರಿಸುವ ಅವಶ್ಯಕತೆವಿಲ್ಲವೆಂದು ನನಗೆ ಅನ್ನಿಸುತ್ತದೆ. ತಿಥಿ ಒಂದು ಒಳ್ಳೆಯ ಸಿನೆಮಾ. ಕನ್ನಡದಲ್ಲಿ ಏನು ಇಲ್ಲ, ಕನ್ನಡ ಸಿನೆಮಾಗಳೆಲ್ಲಾ ಬರೇ ಬೋರಿಂಗ್ ಎಂದು ಬೊಬ್ಬೆ ಹೊಡೆಯುವ ಜನರು ಒಂದು ಬಾರಿಯಾದರು ತಿಥಿಗೆ ಹೋಗಿ ಬರಬೇಕು.

ಅಂತರಾಷ್ಟೀಯ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ತಿಥಿ ನೋಡುವುದಕ್ಕಿಂತ, ನಮ್ಮ ಕನ್ನಡ ಸಿನೆಮಾ, ವಿಭಿನ್ನ ರೀತಿಯ ಮತ್ತು ನೈಜ ಮನರಂಜನಾ ಪರಿಪೂರ್ಣ ಸಿನೆಮಾ ಎಂದು ನೋಡಿದರೆ  ಮಜ ಜಾಸ್ತಿ. ಇಷ್ಟೆಲ್ಲಾ ಇರುವುದಕ್ಕೆ ಅಲ್ಲವೋ ಅಷ್ಟೆಲ್ಲಾ ಪ್ರಶಸ್ತಿಗಳ ಸರಮಾಲೆ?

ಈರೆಗೌಡ್ರು, ರಾಮ್ ರೆಡ್ಡಿ ಮತ್ತು ಚಿತ್ರತಂಡಕ್ಕೆ ಶುಭವಾಗಲಿ. ಮುಂದೆ ಈ ತಂಡದಿಂದ ಕನ್ನಡಕ್ಕೆ ಇನ್ನೂ ಹೆಚ್ಚು ಒಳ್ಳೆ ಸಿನೆಮಾಗಳು ಸಿಗುವಂತಾಗಲಿ.

"ಇದುವರೆಗೂ ನಾನು ಹೇಳಿದ್ದು ಒಂದು ಕಥೆಯೋ ಅಥವಾ ನೆನ್ನೆ ಕಂಡ ಕನಸೋ ನನಗಂತು ಗೊತ್ತಿಲ್ಲ".
(ತಿಥಿ ನೋಡಿದವರಿಗೆ ಈ ಮಾತಿನ ಅರ್ಥ ತಿಳಿಯುತ್ತದೆ).

ಕುಡಿಯುವ ನೀರು ನಮ್ಮೆಲ್ಲರ ಹಕ್ಕು - ಕಳಸಾ ಬಂಡೂರಿ ಹೋರಾಟವನ್ನು ಬೆಂಬಲಿಸಿ

ಒಂದು ವರ್ಷದಿಂದ ಜನರು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರೆ ಅದು ನಿಜವಾಗಿಯೂ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಜನರ ಬದುಕಲು ಅತ್ಯಗತ್ಯವಾದ ಕುಡಿಯುವ ನೀರನ್ನು ಒದಗಿಸಲು ಸರ್ಕಾರದಿಂದ ಸಾಧ್ಯವಿಲ್ಲದಿದ್ದರೆ ಅಂತಹ ಸರ್ಕಾರಗಳಾದರೂ ನಮಗೇತಕ್ಕೆ? ಕಳಸಾ ಬಂಡೂರಿ ಬೆಂಬಲಿಸದ ಪ್ರತಿಯೊಬ್ಬ ರಾಜಕಾರಣಿಯೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.

ಜನರು ಸಾಯುತ್ತಿದ್ದರೂ ನೋಡತ್ತ ಸುಮ್ಮನೆ ಕೂರಲು ಹೇಗಾದರೂ ಈ ರಾಜಕಾರಣಿಗಳಿಗೆ ಮನಸ್ಸಾಗುತ್ತದೆಯೋ. ತೆರಿಗೆ ಹಣವನ್ನು ಮನಬಂದಂತೆ ಪೋಲು ಮಾಡುವುದು ಬಿಟ್ಟರೆ ಇವರಿಗೆ ಬೇರೇನು ತಿಳಿದಿರುವಂತೆ ಕಾಣುವುದಿಲ್ಲ. ಹೇಗಾದರೂ ಹಣ ತಿಂದು ಸಾಯಲಿ ಕೊನೆಯ ಪಕ್ಷ ಜನರ ಕೂಗಿಗೆ ಸ್ಪಂದಿಸುತ್ತಾರೆಯೇ ಎಂದರೆ ಅದೂ ಇಲ್ಲ. ಇಂತಹ ದಂಡಪಿಂಡಗಳನ್ನು ಯಾವ ಭಾಷೆಯಲ್ಲಿ ಉಗಿಯಬೇಕು ಎಂಬುದೇ ತಿಳಿಯತ್ತಿಲ್ಲ.

ಕುಡಿಯುವ ನೀರು ಭೂಮಿಯ ಮೇಲೆ ಬದುಕಿರುವ ಪ್ರತೀ ಜೀವಿಗೂ ಅವಶ್ಯಕವಾಗಿ ಬೇಕಿರುವ ವಸ್ತು. ಮೂಕ ಪ್ರಾಣಿಗಳಿಗೆ ನೀರು ಸಿಗದ್ದಿದ್ದರೆ ಅವು ಸಾಯುತ್ತವೆ, ಆದರೆ ಮನುಷ್ಯನ ವಿಚಾರದಲ್ಲಿ ಹಾಗಲ್ಲ ಮನುಷ್ಯ ತನಗೆ ಬೇಕಿರುವುದನ್ನು ಕೇಳಿ ಪಡೆದುಕೊಳ್ಳುವ ಅವಕಾಶಗಳನ್ನು ಹೊಂದಿದ್ದಾನೆ ಮತ್ತು ಇದು ಆತನ ಹಕ್ಕು. ಆದರೆ ಇಂದು ಆಗುತ್ತಿರುವುದಾದರೂ ಏನು, ವರ್ಷಾನುಗಟ್ಟಲೆ ಹೋರಾಟ ಮಾಡಿದರೂ ಏನು ಕ್ರಮ ಕೈಗೊಳ್ಳದ ಈ ಸರ್ಕಾರ ಸುಮ್ಮನೆ ಕೇಳಿದರೆ ಕೊಡುತ್ತಾರೆಯೇ?. ಇಂತಹ ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಡಲು ಇಂದು ಜನರು ಹೋರಾಟ ಮಾಡಬೇಕಾಗಿದೆ ಕೆಲವು ಬಾರಿಯಂತು ಪ್ರಾಣವನ್ನೇ ಕೊಟ್ಟು ನಮಗೆ ಅಗತ್ಯವಾದದನ್ನು ಪಡೆದುಕೊಳ್ಳಬೇಕು. ಪರಿಸ್ಥಿತಿ ಹೀಗಿರುವಾಗ ಕಳಸ ಬಂಡೂರಿ ಹೋರಾಟ ಮಾತ್ರ  ಸರ್ಕಾರ ಮತ್ತು ರಾಜಕಾರಣಿಗಳ ಪಾಲಿಗೆ ಸೊಳ್ಳೆಯ ಕೂಗಿನಂತಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸದ ಇಂತಹ ರಾಜಕಾರಣಿಗಳು ನಿಮ್ಮ ಮನೆ ಬಾಗಲಿಗೆ ಓಟು ಕೇಳಲು ಬಂದಾಗ ಸಗಣಿಯಿಂದ ಅವರ ಮುಖಕ್ಕೆ ಬಾರಿಸಬೇಕು. ಗೂಟ ಕಿತ್ತುಕೊಂಡು ಒಡೆದರೂ ತಪ್ಪಲ್ಲ.

ಕಳಸಾ ಬಂಡೂರಿ ವಿಚಾರವಾಗಿ ದನಿ ಎತ್ತದ ಕರ್ನಾಟಕದ ೨೮ ಎಂ.ಪಿಗಳು ಎಲ್ಲಿದ್ದಾರೆ ಎಂದು ಯಾರಾದರೂ ಕೇಳಿದರೆ "ಜನರ ದುಡ್ಡಲ್ಲಿ ಮಜಾ ಮಾಡ್ತಾವ್ರೆ" ಎಂದು ಎಲ್ಲರೂ ಸರಾಗವಾಗಿ ಉತ್ತರಿಸುತ್ತಾರೆ. ಕೆಲವು ಎಂ.ಪಿಗಳು ಪ್ರಧಾನಿಯವರೊಡನೇ ಇದರ ಬಗ್ಗೆ ಚರ್ಚೆ ನಡೆಸಿದ್ದರು ಅದು ನೆಪಕ್ಕೋ, ಅವರ ಅಸ್ತಿತ್ವದ ವಿಚಾರಕ್ಕೋ ಇರಬಹುದು. ನಿಜವಾಗಿಯೂ ಕಳಸ ಬಂಡೂರಿ ಜನರ ಹಿತ ಕಾಯುವವರಾಗಿದ್ದರೇ ನಿರಂತರವಾಗಿ ಪ್ರಧಾನಿಯವರ ಮೇಲೆ ಒತ್ತಡ ತರಬೇಕಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ೨೮ ಜನ ಎಂಪಿಗಳಲ್ಲಿ ೧೭ ಜನರು ಬಿಜೆಪಿ ಸಂಸದರು ಉಳಿದ ಹಾಗೆ ೯ ಕಾಂಗ್ರೆಸ್ ಹಾಗೂ ೨ ಜೆಡಿಎಸ್. ಬಹುಪಾಲು ಬಿಜೆಪಿಯವರೇ ಇದ್ದಾರೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿರುವಾಗ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೇಳಲು ಇವರಿಗೆ ಸಾಧ್ಯವೇ? ಬಂಡಾಯವೆದ್ದರೆ ಇವರ ಕುರ್ಚುಗಳ ಗತಿಯೇನು? ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರ ಪಾಡು ಏನಾಗಬೇಕು?. ಇನ್ನೂ ಕಾಂಗ್ರೇಸಿನವರನ್ನು ಕೇಳಿದರೆ ಕೇಂದ್ರದಲ್ಲಿ ಬಿಜೆಪಿಯವರು ಅಧಿಕಾರದಲ್ಲಿರುವಾಗ ನಾವೇನು ಮಾಡಲು ಸಾಧ್ಯ? ಎಂದು ನಮಗೆ ಪ್ರಶ್ನೆ ಕೇಳುತ್ತಾರೆ. ಹಾಗಿದ್ದರೇ ಹಿಂದೆ ಅಧಿಕಾರದಲ್ಲಿ ಇದ್ದವರು ಇದೇ ಕಾಂಗಿಗಳಲ್ಲವೋ? ಅವಾಗ ಏನು ಕಿಸಿದಿದ್ದಾರೆ?. ಈ ಜೆಡಿಎಸ್ ಅಂತು ಅತ್ತಲಾಗೂ ಇಲ್ಲ ಇತ್ತಲಾಗೂ ಇಲ್ಲ ಎಂಬಂತೆ ಇದೆ.

ಅಂದು ಸ್ವತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿಯಾಯಿತು. ಇಂದು ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ಜೊತೆ ಗುದ್ದಾಡಬೇಕಿದೆ. ಕರ್ನಾಟಕದ ಜನರ ಸಮಸ್ಯೆಯನ್ನು ದೆಹಲಿ ಮಟ್ಟದಲ್ಲಿ ಎತ್ತಿ ಹಿಡಿದು ತೋರಿಸುವ ರಾಜಕಾರಣಿಗಳ ಕೊರತೆ ಇಂದು ನಮ್ಮ ರಾಜ್ಯದಲ್ಲಿದೆ. ಕೆಲವು ಅಂಡೆ ಪಿರ್ಕಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕಳಸ ಬಂಡೂರಿ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ. ಇಂದು ಮಹದಾಯಿ ನದಿ ನೀರು ನ್ಯಾಯಾಧೀಕರಣ  ಕರ್ನಾಟಕದ ಮಧ್ಯಂತರ ಅರ್ಜಿ ವಜಾ ಮಾಡಿರುವುದಕ್ಕೆ ಇಲ್ಲಿಯ ೨೮ ಸಂಸದರು, ರಾಜ್ಯ ಸರಕಾರ  ಹಾಗೂ ಕೇಂದ್ರ ಸರಕಾರಗಳೇ ನೇರ ಕಾರಣ.  ಯಾವ ಅನ್ನ ತಿನ್ನುವ ರಾಜಕಾರಣಿ ಇದುವರೆಗೂ ಕಳಸಾ ಬಂಡೂರಿ ಬೆಂಬಲಿಸಿದ್ದಾನೆ ಹೇಳಿ? ನಾಚಕೆ ಮಾನ ಮರ್ಯಾದೆ ಬಿಟ್ಟು ನಿಂತಿರುವ ಈ ದರಿದ್ರ ರಾಜಕಾರಣಿಗಳಿಕೆ ಬೇಕಿರುವುದು ಹಣ ಮತ್ತು ಅಧಿಕಾರವೇ ಹೊರತು ಜನರ ಕಷ್ಟ ಸುಖವಲ್ಲ.
ಕಳಸಾ ಬಂಡೂರಿ ವಿವಾದ ಬಗೆಹರಿಯವವರೆಗೂ ತಮಿಳು ನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು, ಗೋವ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಬೇಕು ಆಗಲಾದರೂ ಕೇಂದ್ರ ಸರ್ಕಾರ ಕಣ್ಣು ತರೆಯುತ್ತ ನೋಡೋಣ.

"ಜೈ ಜವಾನ್ ಜೈ ಕಿಸಾನ್" ಎಂದು ಹೇಳುವ ಸರ್ಕಾರ ರೈತನನ್ನು ಸಹ ಸೈನಿಕನಂತೆ ಗೌರವಿಸಬೇಕು. ಇಂದು ನಮ್ಮ ಕಳಸಾ ಬಂಡೂರಿ ಭಾಗದ ರೈತರು ಕೇಳುತ್ತಿರುವುದು ಕುಡಿಯುವ ನೀರಲ್ಲದೇ ಬೇರಾವ ಸವಲತ್ತುಗಳನ್ನು ಅಲ್ಲ. ಇದನ್ನೂ ಮಾಡದ ಸರ್ಕಾರ ಇದ್ದರೆಷ್ಟು ಹೋದರೆಷ್ಟು?. ಕಳಸಾ ಬಂಡೂರಿ ಯೋಜನೆಯಿಂದ ಪ್ರಯೋಜನ ಪಡೆಯುವ ಧಾರವಾಡ, ಬೆಳಗಾವಿ ಮತ್ತು ಗದಗ ಭಾಗದ ಸಂಸದರುಗಳೆಲ್ಲಾ ಬಿಜೆಪಿಯವರೇ ಇರುವಾಗ ಇವರು ನಿಜವಾಗಿಯೂ ಈ ಯೋಜನೆಯನ್ನು ಬೆಂಬಲಿಸುತ್ತಾರೆಯೇ?

ಇಂತಹ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಬೇಕಾದರೆ ಪ್ರತಿಯೊಬ್ಬ ಕನ್ನಡಿಗನೂ ಕಳಸಾ ಬಂಡೂರಿ ಯೋಜನೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು.
#KalasaBanduri

Thursday, 15 September 2016

ಕರ್ವಾಲೋ ಕಾದಂಬರಿಯ ಪಾತ್ರಗಳು



1980 ರಲ್ಲಿ ಮೊದಲು ಮುದ್ರಣಗೊಂಡು ಇವತ್ತಿನವರೆಗೆ ಸುಮಾರು 36 ಮರುಮುದ್ರಣಗೊಂಡು  ಜನಪ್ರಿಯವಾಗಿರೋ ಕರ್ವಾಲೋ ಕಾದಂಬರಿ ಎಲ್ಲರಿಗೂ ಇಷ್ಟವಾಗಿರುವುದಕ್ಕೆ ಈ ಕಾದಂಬರಿಯಲ್ಲಿರುವ ಕೆಲವು ವಿಶೇಷ ಪಾತ್ರಗಳು ಕೂಡ ಕಾರಣವಾಗಿವೆ. 

ಕಾದಂಬರಿಯ ಪ್ರಾರಂಭದಲ್ಲಿ ನಮಗೆ ಮೊದಲು ಪರಿಚಯವಾಗುವ ಪಾತ್ರಗಳೆಂದರೆ ಮಂದಣ್ಣ ಮತ್ತು ಲಕ್ಷ್ಮಣ. ಹೊರ ನೋಟಕ್ಕೆ ಹಳ್ಳಿ ಗಮಾರನಂತೆ, ಹೆಡ್ಡನಂತೆ ಕಾಣುವ ಮಂದ ಬುದ್ಧಿಯ ಮಂದಣ್ಣ ಕರ್ವಾಲೋರ ದೃಷ್ಟಿಯಲ್ಲಿ ಅವನೊಬ್ಬ 'ಹೊಮೋಸೆಪಿಯನ್ ವರ್ಗದ ಅಪೂರ್ವ ಸ್ಪೆಸಿಮನ್'. ನಿರೂಪಕರಿಗೂ ಮೊದ ಮೊದಲು ಮಂಗಣ್ಣನಂತೆ ಕಂಡ ಈ ಮಂದಣ್ಣ ನಂತರ ವಿಶೇಷ ವ್ಯಕ್ತಿಯಾಗಿ ಚಿತ್ರಣಗೊಂಡಿರುವುದನ್ನು ನಾವು ಕಾಣಬಹುದು.
ಜೇನು, ಕಾಡು, ಹುಳ, ಹಾರುವ ಓತಿ ಹೀಗೆ ಹಲವು ಉಪಯುಕ್ತ ವಿಚಾರಗಳ ಜೊತೆಗೆ ಮೆರೇಜು, ಪಿಗ್ಮಟನ್ ಪ್ರಸಂಗದಂತಹ ಹಾಸ್ಯವನ್ನು ಮಂದಣ್ಣ ನಮಗೆ ಬಡಿಸುತ್ತಾನೆ. ಪ್ರಾರಂಭದಲ್ಲಿ ಸಾಮಾನ್ಯನಾಗಿ ಕಾಣುವ ಇವನು ಕಾದಂಬರಿಯ ಕೊನೆಯಲ್ಲಿ ಅಗೋಚರ ವಿಶ್ವದ ತುಣುಕಾಗಿ ನಮಗೆ ಕಾಣುತ್ತಾನೆ.
ಮಂದಣ್ಣನ ಆಪ್ತನಾದ ಲಕ್ಷ್ಮಣ ಮಂದಣ್ಣನ ಮದುವೆ ಹಾಗೂ ಮಂದಣ್ಣ ಜೈಲಿಗೆ ಹೋಗುವಾಗ ತೋರಿದ ಚಾಣಾಕ್ಷ ಬುದ್ಧಿ ಮತ್ತು ಸಮಯ ಪ್ರಜ್ಞೆಯಿಂದ ಕಾದಂಬರಿಯ ಮೊದಲಾರ್ಧದಲ್ಲಿ  ತನ್ನದೇ ಆದ ವಿಶೇಷ ಛಾಪು ಮೂಡಿಸಿದ್ದಾನೆ.  

"ಕಾಣ್ತದೆ, ಆದ್ರೆ ಕಾಣಕಿಲ್ಲ" ಎಂಬ ಮಾತು, ಮುಗ್ಧತೆ ಮತ್ತು ಚೇಷ್ಟೆಯೊಂದಿಗೆ ನಮ್ಮನ್ನು ಅಲ್ಲಲ್ಲಿ ನಗಿಸುವ ಪಾತ್ರವೆಂದರೆ ಪ್ಯಾರನದು. ಪಿಗ್ಮಟನ್ ಪುರಾಣದಲ್ಲಿ ಧರ್ಮದ ಬಗ್ಗೆ ಅವನು ಆಡುವ ಮಾತುಗಳನ್ನು ನಾವು ಗಮನಿಸಬೇಕು. "ತಿನ್ನೋದಕ್ಕೆ ಯಾವ ಧರ್ಮದ ಹಂಗೇಕೆ" ಅನ್ನೋದು ನಿಜ ಅನಿಸುತ್ತದೆ.
ಪ್ರಭಾಕರನ ಫೋಟೋಗ್ರಫಿ ಮತ್ತು ಬುದ್ಧಿವಂತಿಕೆ, ಇಟ್ಟಿಗೆ ಸುಡುವವನ ಅರ್ಥವಾಗದ ಮಾತು, ವೋಲ್ಟ್ ಸಾನ್ ವೆನ್ಸ್ ರ ವಕೀಲಿ ಬುದ್ಧಿ, ನಾಗರಾಜನ ದೃಷ್ಟಿಕೋನ ಇವೆಲ್ಲವೂ ಕಾದಂಬರಿಯಲ್ಲಿ ಒಂದೊಂದು ದಿಕ್ಕಿನತ್ತ ನಮ್ಮ ಯೋಚನೆಗಳನ್ನು ಎಳೆದುಕೊಂಡು ಹೋಗುತ್ತವೆ. ಕರ್ವಾಲೋರವರು ಮಂದಣ್ಣನ ಜೊತೆ ಸೇರಿ ಮಾಡುತ್ತಿದ್ದ ಸಂಶೋಧನೆ ನಾರ್ವೆ ರಾಮಯ್ಯನಿಗೆ ಅಷ್ಟೇನು ಮುಖ್ಯವಾಗಿ ಕಾಣದಿರುವುದು ಸಾಮಾನ್ಯರ ದೃಷ್ಟಿಯಲ್ಲಿ ವಿಜ್ಞಾನ ಎಂಬುದು ಹೇಗೆ ಕಾಣುತ್ತದೆ ಎಂಬುದಕ್ಕೆ ಉದಾಹರಣೆ.

ಬಿರಿಯಾನಿ ಮತ್ತು ರೊಮ್ಯಾನ್ಸ್ ನಿಂದಲೇ ಜನರಿಗೆ ಇಷ್ಟವಾಗುವ ಕರಿಯಪ್ಪನ ಪಾತ್ರ ಕೇವಲ ಅಡುಗೆಗೆ ಸೀಮಿತವಾಗದೆ ಕಂಡ ಕಂಡಲ್ಲಿ ಕೋವಿ ಹಿಡಿದು ಶಿಕಾರಿಗೆ ಇಳಿಯುವುದರಿಂದ ಹಿಡಿದು ಸರ ಸರನೆ ಮರ ಹತ್ತುವ ಸಾಹಸದವರೆಗೂ ಹಬ್ಬಿಕೊಂಡಿರುವುದನ್ನು ನೋಡಿದರೆ 'ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ' ಎನಿಸುತ್ತದೆ. ಹಾವು ಹಿಡಿಯುವ ಎಂಗ್ಟನ ಪಾತ್ರ ಕಾದಂಬರಿಯ ಕೊನೆಯಲ್ಲಿ ಬಂದರೂ ಹಾವುಗಳ ಬಗ್ಗೆ ಈತನಿಗೆ ಇರುವ ಜ್ಞಾನ, ಈತನ ಅಲೆಮಾರಿ ಜೀವನ, ಹಾರುವ ಓತಿ ಹುಡುಕುವ ಸಾಹಸದಲ್ಲಿ ತನಗೆ ತಿಳಿಯದಂತೆ ಸಿಲುಕಿಕೊಳ್ಳುವ ಪರಿಯಂತು ಒಂದು ರೀತಿ ವಿಶೇಷವಾಗಿದೆ.

ಮಂದಣ್ಣನಲ್ಲಿರುವ ಜ್ಞಾನವನ್ನು ಗುರುತಿಸಿ, ಕಾಡಿನ ಕೊಂಪೆಯನ್ನು 'ವಂಡೆರ್ ಫುಲ್ ಜಾಗ' ಎಂದು ಕರೆದು ತಮ್ಮ ಸಹಜ ಕುತುಹಲದಿಂದ ಹಾರುವ ಓತಿಯನ್ನು ಹುಡುಕಲು ಹೊರಡುವ ಕರ್ವಾಲೋರವರ ತಾಳ್ಮೆ, ಸರಳ ಜೀವನ, ಕುತುಹಲ, ಉತ್ಸಾಹ, ಪ್ರೋತ್ಸಾಹ ಎಲ್ಲವನ್ನೂ ಕಾದಂಬರಿಯ ಉದ್ದಕ್ಕೂ ನಾವು ಕಾಣಬಹುದು. "ಸಾಕ್ಷಾಧಾರಗಳು ಇಲ್ಲದ ಯಾವುದನ್ನು ನಾನು ನಂಬೋದಿಲ್ಲ" ಎಂಬ ಮಾತಿನ ಮೂಲಕ ಅನಗತ್ಯ ವಿಚಾರಗಳನ್ನು ಬಿಟ್ಟು ಉಪಯೋಗಕ್ಕೆ ಬರುವ ಕೆಲಸಗಳತ್ತ ನಾವು ಗಮನಹರಿಸ ಬೇಕು ಎಂಬುದನ್ನು ಕರ್ವಾಲೋ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾಡು, ಪರಿಸರ, ಗದ್ದೆ ಎಲ್ಲದರ ಬಗ್ಗೆ ಬೇಸರ ಮೂಡಿ ಊರನ್ನೇ ಬಿಟ್ಟು ಹೋಗಲು ತಯಾರಾಗಿದ್ದು, ಮಂದಣ್ಣ ಮತ್ತು ಕರ್ವಾಲೋರವರ ಪರಿಚಯದ ನಂತರ ಅವರುಗಳಿಂದ ಪಡೆದ ಜ್ಞಾನದಿಂದಾಗಿ ತನ್ನಲಿದ್ದ ಕುತುಹಲ ಮತ್ತು ಸಾಹಸ ಗುಣವನ್ನು ಬಡಿದೆಬ್ಬಿಸುವ ಮೂಲಕ ಹೊಸ ಲೋಕವನ್ನು ಕಾಣುವ ನಿರೂಪಕರು ಕಾದಂಬರಿಯ ಪ್ರಾರಂಭದಿಂದ ಕೊನೆಯವರೆಗೂ ಪ್ರತೀ ಮನುಷ್ಯನಲ್ಲೂ ಒಂದಷ್ಟು ವಿಚಾರಗಳನ್ನು ತಿಳಿದುಕೊಂಡು ತಮ್ಮನ್ನು ತಾವು ಬದಲಾಯಿಸಿ ಕೊಳ್ಳುವುದನ್ನು ಕಾಣಬಹುದು. ಕುತುಹಲ ಮತ್ತು ಹೊಸತನ್ನು ತಿಳಿದುಕೊಳ್ಳುವ ಆಸಕ್ತಿಯಿರುವವರೆಗೂ ಪ್ರತೀ ದಿನ ನಮ್ಮ ಜೀವನ ಹೊಸದಾಗಿರುತ್ತದೆ ಎಂಬುದಕ್ಕೆ ಈ ಪಾತ್ರವೇ ಸಾಕ್ಷಿ. 

ಎಲ್ಲಾ ಮಾನವ ಪಾತ್ರಗಳನ್ನು ಮೀರಿದ ಕಿವಿಯೆಂಬ ನಾಯಿಯ ಪಾತ್ರವನ್ನು ಮರೆಯುವ ಹಾಗಿಲ್ಲ. ನಿರೂಪಕ ಮತ್ತು ಕಿವಿಯ ನಡುವಿನ ಸಂಬಂಧ ಎಲ್ಲಾ ಮಾನವ ನಿರ್ಮಿತ ಸಂಬಂಧಗಳಿಗೂ ಮೀರಿದ್ದು ಎಂಬುವುದು ನಿಜ. ಕಿವಿಯ ಬುದ್ಧಿ, ಶಿಕಾರಿ ಗುಣ, ನಿರೂಪಕನ ಜೊತೆಗಿನ ಒಡನಾಟ ಇವೆಲ್ಲವನ್ನೂ ನೋಡಿದರೆ 'ನಂಬಿಕೆಗೆ ಅನರ್ಹವಾಗಿರೋ ಹೊಮೋಸೆಪಿಯನ್ ಗಿಂತ ಈ ಕಿವಿಯೇ ಎಷ್ಟೋ ಮೇಲು' ಅನಿಸುತ್ತದೆ.
ಮೂರರ ಮುಂದೆ ಏಳು ಸೊನ್ನೆ ಹಾಕಿದಷ್ಟು ವರ್ಷಗಳ ಹಿಂದಿನಿಂದ ಬದುಕುತ್ತಿರುವ ಈ ಹಾರುವ ಓತಿಯನ್ನು ಹುಡುಕಲು ಕರ್ವಾಲೋ, ಮಂದಣ್ಣ, ನಿರೂಪಕ, ಬಿರಿಯಾನಿ ಕರಿಯಪ್ಪ, ಎಂಗ್ಟ, ಪ್ರಭಾಕರ ಎಲ್ಲರೂ ಸೇರಿ ಮಾಡುವ ಸಾಹಸ ನೋಡಿದರೆ ನಾವು ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತೆ ನನಗೆ ಕಾಣುತ್ತದೆ.

"ನಾವು ಸಾಮಾನ್ಯವೆಂದು ತಿಳಿದಿರುವ ಯಾವುದೂ ಸಾಮಾನ್ಯವಲ್ಲ, ಅವಕ್ಕೆ ಅಸಾಮಾನ್ಯವಾದ ದೃಷ್ಟಿಕೋನವು ಇರುತ್ತದೆ. ನಾವು ಅದನ್ನ ಕಣ್ಣು ಬಿಟ್ಟು ನೋಡೋದನ್ನ ಕಲಿಯಬೇಕು" ಎಂಬುವುದನ್ನು ತೇಜಸ್ವಿಯವರು ಈ ಪಾತ್ರಗಳ ಮೂಲಕ ನಮಗೆ ತಿಳಿಸಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ನೋಡುತ್ತಿದ್ದರೆ "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಕಶ್ಚಿತವಲ್ಲ" ಎಂಬ ಕುವೆಂಪುರವರ ಮಾತು ಎಷ್ಟು ಚೆನ್ನಾಗಿ ಅರ್ಥ ಪಡೆದುಕೊಂಡಿದೆ ಎಂಬುದನ್ನು ಗಮನಿಸಬಹುದು.

Thursday, 4 August 2016

ಎರಡು ಬಿಳಿ ಒಂದು ಕೆಂಪು ಫಿಕ್ಸು

ಆಶಾಡದ ಗಾಳಿ ತಣ್ಣಗಾಗುತ್ತಿದೆ ಎಂದರೆ ಅದು ಶ್ರಾವಣ ಮಾಸ ಆರಂಭದ ಮುನ್ಸೂಚನೆ. ಆಶಾಡದ ಗಾಳಿ ಯರ್ರಾ ಬಿರ್ರಿ ಬೀಸಿ ಜನರನ್ನು ನಲುಗಿಸಿದರೆ ಶ್ರಾವಣದಲ್ಲಿ ಒಂದಷ್ಟು ಜನ ಪೂಜೆ ನೆಪದಲ್ಲಿ ಪರೋಕ್ಷ ವಸೂಲಿ ಮಾಡುವುದರ ಮೂಲಕ ಜನರನ್ನು ನಲುಗಿಸಿಬಿಡುತ್ತಾರೆ. ಆದರೂ ಶ್ರಾವಣ ಮಾಸದ ಪ್ರತೀ ಶನಿವಾರ ಜನರಿಗೆ ಎರಡು ಬಿಳಿ ಒಂದು ಕೆಂಪು ನಾಮ ಬಳಿಯುವ ಈ 'ದಾಸಪ್ಪ' ಅಥವಾ 'ದಾಸಯ್ಯ' ನವರ ಪಾದ ಪೂಜೆ ಮಾಡಲು ಜನರು ಮುಗಿಬೀಳುತ್ತಿರುತ್ತಾರೆ.

ಶ್ರಾವಣವನ್ನು ಕೆಲವು ಜನರು ಉಪವಾಸ ಮಾಡಿ, ಪೂಜೆ ಮಾಡಿ, ಮಾಂಸಾಹರ ಬಿಟ್ಟು ಬರೇ ಸಸ್ಯಹಾರ ತಿಂದು ಆಚರಣೆ ಮಾಡುವುದುಂಟು. ದೇವಸ್ಥಾನಗಳಲ್ಲಿ ದೇವರ ಜೊತೆ ವ್ಯವಹರಿಸಲು ಪೂಜಾರಿ ಇರುವ ಹಾಗೆ ಶ್ರಾವಣ ಮಾಸದಲ್ಲಿ ಮನೆಗಳಲ್ಲಿ ನಡೆಯುವ ಪೂಜೆಗಳನ್ನು ಜನರು ದಾಸಪ್ಪನವರ ಕೈಲಿ ಮಾಡಿಸುತ್ತಾರೆ. ಇಷ್ಟೇ ಅಲ್ಲದೆ ವಿಷೇಶ ಸಂದರ್ಭಗಳಲ್ಲಿ ಸತ್ಯ ನಾರಾಯಣ ಪೂಜೆ, ಶನಿ ದೇವರ ಪೂಜೆಗಳನ್ನು ಸಹ ಒಬ್ಬೊಬ್ಬ ಸ್ವೆಷಲಿಸ್ಟ್ ಪೂಜಾರಿಗಳ ಕೈಯಲ್ಲಿ ಮಾಡಿಸುವುದುಂಟು. ಯಾಕೆ ನಾವು ಪ್ರತೀ ಸಾರಿಯೂ ದೇವರ ಜೊತೆ ವ್ಯವಹರಿಸಲು ಹಿಂದೇಟು ಹಾಕುತ್ತಿದ್ದೇವೆ? ನಾವು ಮಾಡುವ ಪೂಜೆ ಪೂಜೆ ಅಲ್ಲವೇ? ಪೂಜೆ ಮಾಡುವುದಕ್ಕೆ ವಿಶೇಷ ಏಜೆಂಟರುಗಳು ಅವಶ್ಯಕತೆ ಏನಿದೆ? ದೇವರಿಗೆ ನಾವು ಮಕ್ಕಳಲ್ಲವೇ? ಹಾಗಿದ್ದರೆ ಅಪ್ಪ ಅಮ್ಮನ ಜೊತೆ ಮಾತನಾಡಲು ನಮಗೇನಾದರೂ ಮತ್ತೊಬ್ಬರ ಸಹಾಯ ಬೇಕೆ?
ಹೀಗೆ ಯೋಚಿಸುವುದಾದರೆ ದೇವರಿಗೆ ನಮ್ಮ ಭಕ್ತಿಯನ್ನು ಮುಟ್ಟಿಸಲು ಮತ್ತೊಬ್ಬರ ಅವಶ್ಯಕತೆ ಇಲ್ಲವೇ ಇಲ್ಲ. ನಾವು ಮಾಡುವುದು ಪೂಜೆಯನ್ನೇ, ದಾಸಪ್ಪ ಪೂಜಾರಪ್ಪ ಮಾಡುವುದು ಸಹ ಪೂಜೆಯನ್ನೇ. ಅರ್ಥವಾಗದ ಒಂದೆರಡು ಮಂತ್ರಗಳನ್ನು ಉದುರಿಸುವುದರಿಂದ ಇಂತಹ ವಸೂಲಿ ಜನರು ನಮಗೆ ವಿಶೇಷವಾಗಿ, ದೇವರ ಬಲಗೈ ಬಂಟರಾಗಿ, ದೇವರಿಗೆ ನಮ್ಮ ಕಷ್ಟಗಳನ್ನು ತಿಳಿಸುವ ಪ್ರತಿನಿಧಿಗಳಾಗಿ ಕಾಣುತ್ತಾರಷ್ಟೆ. ಇಲ್ಲಿ ನಾನು ಹೇಳಲು ಹೊರಟಿರುವುದು  ಶ್ರಾವಣ ಮಾಸದಲ್ಲಿ ವಸೂಲಿಗೆ ನಿಲ್ಲುವ ದಾಸಯ್ಯರ ಬಗ್ಗೆ ಹೀಗಾಗಿ ಸತ್ಯ ನಾರಯಣ ಪೂಜೆ, ಶನಿ ದೇವರ ಪೂಜೆ ಎಲ್ಲವನ್ನೂ ಇಲ್ಲಿ ತುರುಕುವ ಅವಶ್ಯಕತೆ ಇಲ್ಲ ಎನಿಸುತ್ತದೆ.

ಮುಖ್ಯವಾಗಿ ತಿರುಪತಿ ತಿಮ್ಮಪ್ಪ ಅಥವಾ ಹನುಮಂತನ ಒಕ್ಕಲಿನವರು (ಈ ದೇವರುಗಳನ್ನು ಮನೆ ದೇವರಾಗಿ ಪೂಜಿಸುವವರು) ಶ್ರಾವಣ ಮಾಸದ ಯಾವುದಾದರೂ ಒಂದು ಶನಿವಾರ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಈ ವಿಶೇಷ ಪೂಜೆ ಮಾಡಲು ದಾಸಯ್ಯನ ಮುಂದೆ ಅಂಗಲಾಚಿ ಬೇಡಿ ಕರೆತಂದು ಅವನ ಕೈಯಲ್ಲೇ ಪೂಜೆ ಮಾಡಿಸುತ್ತಾರೆ. ಶ್ರಾವಣ ಮಾಸದಲ್ಲಿ ಈ ದಾಸಯ್ಯನವರಿಗೆ ಇರುವ ಬೇಡಿಕೆ ಬಹುಶಃ ಸಿ.ಎಂ ಪಿ.ಎಂ ಗಳಿಗೂ ಇಲ್ಲವೇನೋ!, ಒಂದೇ ದಿನದಲ್ಲಿ 15-20 ಮನೆಗಳಲ್ಲಿ ಪೂಜೆ ಮಾಡಿ ಮನೆಯವರಿಗೆ ಉಂಡೆ ನಾಮ ತಿಕ್ಕಿ ತಮ್ಮ ಜೇಜು ತುಂಬಿಸಿಕೊಳ್ಳುತ್ತಾರೆ. ಮೊದ ಮೊದಲು ನೂರು ಇನ್ನೂರು ರೂಪಾಯಿಗಳಿಗೆಲ್ಲಾ ತೃಪ್ತರಾಗುತ್ತಿದ್ದ ಇವರು ಇತ್ತೀಚಿನ ದಿನಗಳಲ್ಲಿ ಐನೂರರ ಗರಿ ಗರಿ ನೋಟಿಲ್ಲದೆ ಪೂಜೆ ಮಾಡುವುದಿಲ್ಲ.

ಈ ದಾಸಯ್ಯನವರನ್ನು ನಮ್ಮ ವಾಹನಗಳಲ್ಲೇ ಕರೆದುಕೊಂಡು ಬರಬೇಕು. ಮನೆಯವರು ಈತನ ಪಾದ ಪೂಜೆ ಮಾಡಿ ಮನೆಯೊಳಗೆ ಬರ ಮಾಡಿಕೊಳ್ಳುತ್ತಾರೆ, ನಂತರ ತಾನು ತಂದಿರುವ ವಿಗ್ರಹಗಳನ್ನು ಜೋಡಿಸಿ, ಮನೆಯ ಗಂಡಸರಿಗೆ ಎರಡು ಬಿಳಿ ಒಂದು ಕೆಂಪು ಹಾಗೂ ಹೆಂಗಸರಿಗೆ ಒಂದು ಕೆಂಪು ನಾಮ ಬಳಿದು ತನ್ನ ವಸೂಲಿ ಕಾರ್ಯಕ್ಕೆ ಚಾಲನೆ ಕೊಡುತ್ತಾನೆ. ವಿಳ್ಯದೆಲೆಯಲ್ಲಿರುವ ಗರಿ ಗರಿ ನೋಟಿನ ವಾಸನೆ ಹಿಡಿಯುತ್ತಾ ದೇವರ ಪೂಜೆ ಮಾಡುವ ದಾಸಯ್ಯನವರು ಜಾಗಟೆ ಬಾರಿಸಿ ಶಂಖ ಊದುವುದರ ಮೂಲಕ ದೇವರಿಗೆ ಮನೆಯವರ ಇರುವಿಕೆಯನ್ನು ತಿಳಿಸುತ್ತಾನೆ. ಪೂಜೆಗೆ ಸಸ್ಯಹಾರ ಎಡೆ ಇಟ್ಟಿದ್ದರೆ ಪರವಾಗಿಲ್ಲ ಮಾಸಂಹಾರಿವಿದ್ದರಂತು ಅದರ ಜೊತೆಗೆ ಮದ್ಯವನ್ನು ಸಹ ಇಟ್ಟು ಪೂಜೆ ಮಾಡಿಸಬೇಕು. ಹೀಗೆ ಎಡೆಗೆ ಇಟ್ಟ ಮದ್ಯವನ್ನು ತನ್ನ ಹೊಟ್ಟೆಯೊಳಗೆ ಇಳಿಸಿಕೊಂಡು ಗಂಟೆ ಬಾರಿಸುವ ದಾಸಯ್ಯನವರು ಹೋಗುವ ಮುನ್ನ ಪೂಜೆಗೆ ಇಟ್ಟ ಕಾಣಿಕೆಯ ಜೊತೆಗೆ ಹೊಸ ಗಂಟೆಗೆಂದು ಅಥವಾ ಹೊಸ ವಿಗ್ರಹ ಕೊಂಡುಕೊಳ್ಳಲೆಂದು ಇನ್ನೂ ಒಂದಷ್ಟು ಹಣವನ್ನು ಪೀಕುವುದುಂಟು, ಅಲ್ಲಿಗೆ ಆತ ಹಾಕಿದೆ ಉಂಡೆ ನಾಮಕ್ಕೆ ಬೆಲೆಬಂದಂತಾಯಿತು.

ಒಂದು ಮನೆಯಲ್ಲಿ 500 ರೂ. ಕಾಣಿಕೆ ಎಂದುಕೊಂಡರೂ ಒಂದು ಶನಿವಾರದಲ್ಲಿ ದಾಸಯ್ಯ ಪೂಜೆ ಮಾಡುವ 15 ಮನೆಗಳಲ್ಲಿ ಸಿಗುವ ಕಾಣಿಕೆ ಹಣ ಸುಮಾರು 7500. ಒಂದು ತಿಂಗಳಿಗೆ ಸುಮಾರು 30000. ಜೀವನ ಸಾಗಿಸಲು ಇಷ್ಟು ಸಾಕಲ್ಲವೇ? ಜೊತೆಗೆ ಸಣ್ಣ ಪುಟ್ಟ ದೇವಸ್ಥಾನಗಳನ್ನು ನಡೆಸುವ ಇವರು ವರ್ಷ ಪೂರ್ತಿ ಜೀವನ ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ. ದಾಸಯ್ಯನವರ ಆದಾಯದ ಮಾತುಕತೆ ಪಕ್ಕಕ್ಕೆ ಇಟ್ಟು ಮಾತನಾಡುವುದಾದರೆ, ನಮಗೆ ಕಾಡುವ ಪ್ರಶ್ನೆ ದೇವರ ಜೊತೆ ಮಾತನಾಡಲು ನಮಗೆ ಸಾಧ್ಯವಿಲ್ಲವೇ? ದಾಸಯ್ಯ ಮಾಡಿದ ಪೂಜೆ ಮಾತ್ರ ಪೂಜೆನಾ? ಪಾದ ಪೂಜೆ ಮಾಡಿ ಅವನಿಗೆ ಒಂದಷ್ಟು ದುಡ್ಡು, ಶರಾಬು ಕೊಟ್ಟು ಕುಡುಕರ ಕೈಯಲ್ಲಿ ಪೂಜೆ ಮಾಡಿಸುವುದೇ? ಈ ಪ್ರಶ್ನೆಗಳನ್ನು ನಮಗೆ ನಾವೆ ಕೇಳಿಕೊಳ್ಳಬೇಕು ಅಷ್ಟೆ.

ಈ ದಾಸಯ್ಯರ ಹಾವಳಿ ತಾಳಲಾರದೇ ಕೆಲವರು ಅವರ ಮನೆಗಳಲ್ಲಿ ಅವರೇ ಪೂಜೆ ಮಾಡಲು ಮುಂದಾಗಿದ್ದಾರೆ. ಆದರೂ ಅತೀ ಹೆಚ್ಚು ಜನರು ದಾಸಯ್ಯ ಗಂಟೆ ಬಾರಿಸಿ ಶಂಖ ಊದಿದರೇನೆ ದೇವರಿಗೆ ನಮ್ಮ ಇರುವಿಕೆ ತಿಳಿಯುವುದು ಎಂದುಕೊಂಡಿರುವುದಂತು ವಿಪರ್ಯಾಸದ ಸಂಗತಿ. ದೇವರನ್ನು ಭಕ್ತಿಯಿಂದ ನಾವೇ ಪೂಜಿಸೋಣ. ಇದಕ್ಕಾಗಿ ಮತ್ತೊಬ್ಬರನ್ನು ನಾವೇ ಬೆಳಸಿ ಇಂತಹ ಪರೋಕ್ಷ ವಸೂಲಿ, ಇಲ್ಲ ಸಲ್ಲದ ಆಚರಣೆಗಳನ್ನು ಬೆಂಬಲಿಸುವುದು ಸರಿಯೇ?

ನಾನು ಮೇಲೆ ಹೇಳಿದ ಇದಷ್ಟು ಬೆಂಗಳೂರು ನಗರದ ಕತೆಯಾದರೆ ಹಳ್ಳಿಗಳಲ್ಲಿ ಪರಿಸ್ಥಿತಿ ಅಷ್ಟೇನು ಹದಗೆಟ್ಟಿಲ್ಲ ಎನ್ನಬಹುದು. 'ಎಲ್ಲಾ ಕಡೆಯೂ ಹೀಗೆ ತಿನ್ನುವವರು ಇದ್ದೆ ಇರುತ್ತಾರೆ, ರಾಜಕಾರಣಿಗಳು ತಿನ್ನುವುದಿಲ್ಲವೆ? ನಾವು ಬದುಕಲಿ ಅವರು ಬದುಕಲಿ ಬಿಡ್ರಿ.' ಎಂದು ಹೇಳುವ ಮಂದಿಗೆ ಬಹುಶಃ ನನ್ನ ಬರಹ ಸಂಪೂರ್ಣ ಅರ್ಥಹೀನವಾಗಿ ಕಾಣಬಹುದು. ಇದು ಬರೇ ಬದುಕಿನ ಪ್ರಶ್ನೆಯಲ್ಲ, ನಾವು ಸಣ್ಣ ಸಣ್ಣ ವಿಚಾರಗಳನ್ನು ಅರಿತುಕೊಂಡು ಬದುಕಲು ಕಲಿಯದಿದ್ದರೆ ದೊಡ್ಡ ವಿಚಾರಗಳಲ್ಲಿ ಬದಲಾವಣೆ ಬಯಸುದಕ್ಕೆ ಸಾಧ್ಯವೇ ಇಲ್ಲ ಅನಿಸುತ್ತದೆ.

"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?" - ಕುವೆಂಪು

ಕೊನೆ ನುಡಿ: ನಾನು ಮಾತನಾಡುತ್ತಿರುವುದು ದುಡ್ಡು ಪೀಕುವ, ಪಾದ ಪೂಜೆ ಮಾಡಿಸಿಕೊಳ್ಳುವ ಒಂದಷ್ಟು ಜನರ ಬಗ್ಗೆಯ ಹೊರತು ಯಾವುದೇ ಆಚರಣೆ ಬಗ್ಗೆಯಾಗಲಿ ಅಥವಾ ದೇವರ ಮೇಲೆ ಅವರವರಿಗೆ ಇರುವ ನಂಬಿಕೆಗಳ ಬಗ್ಗೆಯಾಗಲಿ ಅಲ್ಲ.

Wednesday, 8 June 2016

ಮೂಕಜ್ಜಿಯ ಕನಸುಗಳು

"ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂತಹ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು. ಆದರು ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ" ಎಂಬ ಮುನ್ನುಡಿಯೊಡನೆ ಪ್ರಾರಂಭವಾಗುವ ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು" ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲೇ ಒಂದು ವಿಶಿಷ್ಟ ಕಾದಂಬರಿ. ಇದನ್ನು ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸೇರಿಸಲಾಗದು. ಈ ಕಾದಂಬರಿಯನ್ನು ಓದಿದಾಗಲೇ ಇದಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದರ ಮಹತ್ವ ನಮಗೆ ತಿಳಿಯುವುದು.

ಮೂಕಜ್ಜಿ ಭವಿಷ್ಯ, ವರ್ತಮಾನ ಹಾಗೂ ಭೂತಕಾಲಗಳಲ್ಲಿ ಸರಾಗವಾಗಿ ತಿರುಗಾಡಬಲ್ಲವಳು. ಇಂತಹ ಅದ್ಭುತ ಶಕ್ತಿಯಿಂದಲೇ ಇಲ್ಲಿ ಮೂಕಜ್ಜಿ ನಮಗೆ ವಿಶಿಷ್ಟವಾಗಿ ಕಾಣಿಸುತ್ತಾಳೆ. ಸುಬ್ಬರಾಯ ನಮ್ಮ ಸಂಪ್ರದಾಯ, ಸಂಸ್ಕೃತಿ, ದೇವರುಗಳ ಬಗ್ಗೆ ಎತ್ತುವ ಎಲ್ಲಾ ಪ್ರಶ್ನೆಗಳಿಗೂ ಮೂಕಜ್ಜಿ ತನ್ನದೇ ಆದ ರೀತಿಯಲ್ಲಿ ನೀಡುವ ವಿಶ್ಲೇಷಣೆಗಳಂತು ಅದ್ಭುತವೇ ಸರಿ.

ಕೆಲವು ದಶಕಗಳ ಹಿಂದೆ ಕಾರಂತರು ಬರೆದ ಈ ಕಾದಂಬರಿ ಈಗಿನ ಕಾಲಕ್ಕೂ ಒಪ್ಪುವಂತದ್ದು ಮತ್ತು ಎಲ್ಲಾ ಕಾಲಕ್ಕೂ ಒಪ್ಪುವಂತಹದ್ದೇ ಸರಿ. ಗಲ್ಲಿ ಗಲ್ಲಿಗೆ ದೇವಸ್ಥಾನಗಳನ್ನು ಮಾಡಿಕೊಂಡು, ಮನಸ್ಸಿಗೆ ಬಂದಂತೆ ಹೊಸ ಹೊಸ ದೇವರುಗಳನ್ನು ಸೃಷ್ಟಿ ಮಾಡುತ್ತಾ, ಧರ್ಮ ಮತ್ತು ದೇವರ ಹೆಸರಿನಲ್ಲಿ ನಮ್ಮನ್ನು ಲೂಟಿ ಮಾಡುವ ಜನರ ಮಧ್ಯೆ ನಾವು ಬದುಕುತ್ತಿರುವಾಗ, ದೇವರಿಗೆ ನಾವು ಕೊಟ್ಟಿರುವ ಮತ್ತು ಕೊಡುತ್ತಿರುವ ಸ್ಥಾನವನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವೆಂದು ನನಗೆ ಕಾಣುತ್ತದೆ.

ಇಲ್ಲಿ ನನಗೆ ತುಂಬಾ ಇಷ್ಟವಾದದ್ದು ಕಾರಂತರ ಜೀವನದೃಷ್ಟಿ ಮತ್ತು ಕಲಾಸೃಷ್ಟಿ. ಮೂಕಜ್ಜಿಯಂತಹ ಒಂದು ಪಾತ್ರವನ್ನು ಸೃಷ್ಟಿಸಿರುವುದು, ಆ ಪಾತ್ರದ ಮೂಲಕ ಮಹತ್ತರ ವಿಷಯಗಳನ್ನು ಜಗತ್ತಿಗೆ ತಿಳಿಸಿರುವುದು ಒಂದು ಪ್ರಯೋಗವಲ್ಲವೇ?. ಜಗತ್ತಿಗೆ ಸಾವಿರ ಸಾವಿರ ದೇವರುಗಳು ಇರುವ ಬದಲು ಒಂದೇ ದೇವರು ಇದ್ದರೆ ಸಾಕು ಎಂಬ ಕಾರಂತರ ನಿಲುವು  ಅದೆಷ್ಟೋ ಅರ್ಥಪೂರ್ಣವಾದದ್ದು.

ನನ್ನ ಈ ಬರವಣಿಗೆಯನ್ನು ವಿಮರ್ಶೆಯೆಂದು ತಿಳಿಯುವ ಅಗತ್ಯವಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ಕಾದಂಬರಿಯ ಬಗ್ಗೆ ತಿಳಿಸುವ ಪ್ರಯತ್ನವಷ್ಟೆ.