1980 ರಲ್ಲಿ ಮೊದಲು ಮುದ್ರಣಗೊಂಡು ಇವತ್ತಿನವರೆಗೆ ಸುಮಾರು 36 ಮರುಮುದ್ರಣಗೊಂಡು ಜನಪ್ರಿಯವಾಗಿರೋ ಕರ್ವಾಲೋ ಕಾದಂಬರಿ ಎಲ್ಲರಿಗೂ ಇಷ್ಟವಾಗಿರುವುದಕ್ಕೆ ಈ ಕಾದಂಬರಿಯಲ್ಲಿರುವ ಕೆಲವು ವಿಶೇಷ ಪಾತ್ರಗಳು ಕೂಡ ಕಾರಣವಾಗಿವೆ.
ಕಾದಂಬರಿಯ ಪ್ರಾರಂಭದಲ್ಲಿ ನಮಗೆ ಮೊದಲು ಪರಿಚಯವಾಗುವ ಪಾತ್ರಗಳೆಂದರೆ ಮಂದಣ್ಣ ಮತ್ತು ಲಕ್ಷ್ಮಣ. ಹೊರ ನೋಟಕ್ಕೆ ಹಳ್ಳಿ ಗಮಾರನಂತೆ, ಹೆಡ್ಡನಂತೆ ಕಾಣುವ ಮಂದ ಬುದ್ಧಿಯ ಮಂದಣ್ಣ ಕರ್ವಾಲೋರ ದೃಷ್ಟಿಯಲ್ಲಿ ಅವನೊಬ್ಬ 'ಹೊಮೋಸೆಪಿಯನ್ ವರ್ಗದ ಅಪೂರ್ವ ಸ್ಪೆಸಿಮನ್'. ನಿರೂಪಕರಿಗೂ ಮೊದ ಮೊದಲು ಮಂಗಣ್ಣನಂತೆ ಕಂಡ ಈ ಮಂದಣ್ಣ ನಂತರ ವಿಶೇಷ ವ್ಯಕ್ತಿಯಾಗಿ ಚಿತ್ರಣಗೊಂಡಿರುವುದನ್ನು ನಾವು ಕಾಣಬಹುದು.
ಜೇನು, ಕಾಡು, ಹುಳ, ಹಾರುವ ಓತಿ ಹೀಗೆ ಹಲವು ಉಪಯುಕ್ತ ವಿಚಾರಗಳ ಜೊತೆಗೆ ಮೆರೇಜು, ಪಿಗ್ಮಟನ್ ಪ್ರಸಂಗದಂತಹ ಹಾಸ್ಯವನ್ನು ಮಂದಣ್ಣ ನಮಗೆ ಬಡಿಸುತ್ತಾನೆ. ಪ್ರಾರಂಭದಲ್ಲಿ ಸಾಮಾನ್ಯನಾಗಿ ಕಾಣುವ ಇವನು ಕಾದಂಬರಿಯ ಕೊನೆಯಲ್ಲಿ ಅಗೋಚರ ವಿಶ್ವದ ತುಣುಕಾಗಿ ನಮಗೆ ಕಾಣುತ್ತಾನೆ.
ಮಂದಣ್ಣನ ಆಪ್ತನಾದ ಲಕ್ಷ್ಮಣ ಮಂದಣ್ಣನ ಮದುವೆ ಹಾಗೂ ಮಂದಣ್ಣ ಜೈಲಿಗೆ ಹೋಗುವಾಗ ತೋರಿದ ಚಾಣಾಕ್ಷ ಬುದ್ಧಿ ಮತ್ತು ಸಮಯ ಪ್ರಜ್ಞೆಯಿಂದ ಕಾದಂಬರಿಯ ಮೊದಲಾರ್ಧದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದ್ದಾನೆ.
"ಕಾಣ್ತದೆ, ಆದ್ರೆ ಕಾಣಕಿಲ್ಲ" ಎಂಬ ಮಾತು, ಮುಗ್ಧತೆ ಮತ್ತು ಚೇಷ್ಟೆಯೊಂದಿಗೆ ನಮ್ಮನ್ನು ಅಲ್ಲಲ್ಲಿ ನಗಿಸುವ ಪಾತ್ರವೆಂದರೆ ಪ್ಯಾರನದು. ಪಿಗ್ಮಟನ್ ಪುರಾಣದಲ್ಲಿ ಧರ್ಮದ ಬಗ್ಗೆ ಅವನು ಆಡುವ ಮಾತುಗಳನ್ನು ನಾವು ಗಮನಿಸಬೇಕು. "ತಿನ್ನೋದಕ್ಕೆ ಯಾವ ಧರ್ಮದ ಹಂಗೇಕೆ" ಅನ್ನೋದು ನಿಜ ಅನಿಸುತ್ತದೆ.
ಪ್ರಭಾಕರನ ಫೋಟೋಗ್ರಫಿ ಮತ್ತು ಬುದ್ಧಿವಂತಿಕೆ, ಇಟ್ಟಿಗೆ ಸುಡುವವನ ಅರ್ಥವಾಗದ ಮಾತು, ವೋಲ್ಟ್ ಸಾನ್ ವೆನ್ಸ್ ರ ವಕೀಲಿ ಬುದ್ಧಿ, ನಾಗರಾಜನ ದೃಷ್ಟಿಕೋನ ಇವೆಲ್ಲವೂ ಕಾದಂಬರಿಯಲ್ಲಿ ಒಂದೊಂದು ದಿಕ್ಕಿನತ್ತ ನಮ್ಮ ಯೋಚನೆಗಳನ್ನು ಎಳೆದುಕೊಂಡು ಹೋಗುತ್ತವೆ. ಕರ್ವಾಲೋರವರು ಮಂದಣ್ಣನ ಜೊತೆ ಸೇರಿ ಮಾಡುತ್ತಿದ್ದ ಸಂಶೋಧನೆ ನಾರ್ವೆ ರಾಮಯ್ಯನಿಗೆ ಅಷ್ಟೇನು ಮುಖ್ಯವಾಗಿ ಕಾಣದಿರುವುದು ಸಾಮಾನ್ಯರ ದೃಷ್ಟಿಯಲ್ಲಿ ವಿಜ್ಞಾನ ಎಂಬುದು ಹೇಗೆ ಕಾಣುತ್ತದೆ ಎಂಬುದಕ್ಕೆ ಉದಾಹರಣೆ.
ಬಿರಿಯಾನಿ ಮತ್ತು ರೊಮ್ಯಾನ್ಸ್ ನಿಂದಲೇ ಜನರಿಗೆ ಇಷ್ಟವಾಗುವ ಕರಿಯಪ್ಪನ ಪಾತ್ರ ಕೇವಲ ಅಡುಗೆಗೆ ಸೀಮಿತವಾಗದೆ ಕಂಡ ಕಂಡಲ್ಲಿ ಕೋವಿ ಹಿಡಿದು ಶಿಕಾರಿಗೆ ಇಳಿಯುವುದರಿಂದ ಹಿಡಿದು ಸರ ಸರನೆ ಮರ ಹತ್ತುವ ಸಾಹಸದವರೆಗೂ ಹಬ್ಬಿಕೊಂಡಿರುವುದನ್ನು ನೋಡಿದರೆ 'ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ' ಎನಿಸುತ್ತದೆ. ಹಾವು ಹಿಡಿಯುವ ಎಂಗ್ಟನ ಪಾತ್ರ ಕಾದಂಬರಿಯ ಕೊನೆಯಲ್ಲಿ ಬಂದರೂ ಹಾವುಗಳ ಬಗ್ಗೆ ಈತನಿಗೆ ಇರುವ ಜ್ಞಾನ, ಈತನ ಅಲೆಮಾರಿ ಜೀವನ, ಹಾರುವ ಓತಿ ಹುಡುಕುವ ಸಾಹಸದಲ್ಲಿ ತನಗೆ ತಿಳಿಯದಂತೆ ಸಿಲುಕಿಕೊಳ್ಳುವ ಪರಿಯಂತು ಒಂದು ರೀತಿ ವಿಶೇಷವಾಗಿದೆ.
ಮಂದಣ್ಣನಲ್ಲಿರುವ ಜ್ಞಾನವನ್ನು ಗುರುತಿಸಿ, ಕಾಡಿನ ಕೊಂಪೆಯನ್ನು 'ವಂಡೆರ್ ಫುಲ್ ಜಾಗ' ಎಂದು ಕರೆದು ತಮ್ಮ ಸಹಜ ಕುತುಹಲದಿಂದ ಹಾರುವ ಓತಿಯನ್ನು ಹುಡುಕಲು ಹೊರಡುವ ಕರ್ವಾಲೋರವರ ತಾಳ್ಮೆ, ಸರಳ ಜೀವನ, ಕುತುಹಲ, ಉತ್ಸಾಹ, ಪ್ರೋತ್ಸಾಹ ಎಲ್ಲವನ್ನೂ ಕಾದಂಬರಿಯ ಉದ್ದಕ್ಕೂ ನಾವು ಕಾಣಬಹುದು. "ಸಾಕ್ಷಾಧಾರಗಳು ಇಲ್ಲದ ಯಾವುದನ್ನು ನಾನು ನಂಬೋದಿಲ್ಲ" ಎಂಬ ಮಾತಿನ ಮೂಲಕ ಅನಗತ್ಯ ವಿಚಾರಗಳನ್ನು ಬಿಟ್ಟು ಉಪಯೋಗಕ್ಕೆ ಬರುವ ಕೆಲಸಗಳತ್ತ ನಾವು ಗಮನಹರಿಸ ಬೇಕು ಎಂಬುದನ್ನು ಕರ್ವಾಲೋ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾಡು, ಪರಿಸರ, ಗದ್ದೆ ಎಲ್ಲದರ ಬಗ್ಗೆ ಬೇಸರ ಮೂಡಿ ಊರನ್ನೇ ಬಿಟ್ಟು ಹೋಗಲು ತಯಾರಾಗಿದ್ದು, ಮಂದಣ್ಣ ಮತ್ತು ಕರ್ವಾಲೋರವರ ಪರಿಚಯದ ನಂತರ ಅವರುಗಳಿಂದ ಪಡೆದ ಜ್ಞಾನದಿಂದಾಗಿ ತನ್ನಲಿದ್ದ ಕುತುಹಲ ಮತ್ತು ಸಾಹಸ ಗುಣವನ್ನು ಬಡಿದೆಬ್ಬಿಸುವ ಮೂಲಕ ಹೊಸ ಲೋಕವನ್ನು ಕಾಣುವ ನಿರೂಪಕರು ಕಾದಂಬರಿಯ ಪ್ರಾರಂಭದಿಂದ ಕೊನೆಯವರೆಗೂ ಪ್ರತೀ ಮನುಷ್ಯನಲ್ಲೂ ಒಂದಷ್ಟು ವಿಚಾರಗಳನ್ನು ತಿಳಿದುಕೊಂಡು ತಮ್ಮನ್ನು ತಾವು ಬದಲಾಯಿಸಿ ಕೊಳ್ಳುವುದನ್ನು ಕಾಣಬಹುದು. ಕುತುಹಲ ಮತ್ತು ಹೊಸತನ್ನು ತಿಳಿದುಕೊಳ್ಳುವ ಆಸಕ್ತಿಯಿರುವವರೆಗೂ ಪ್ರತೀ ದಿನ ನಮ್ಮ ಜೀವನ ಹೊಸದಾಗಿರುತ್ತದೆ ಎಂಬುದಕ್ಕೆ ಈ ಪಾತ್ರವೇ ಸಾಕ್ಷಿ.
ಎಲ್ಲಾ ಮಾನವ ಪಾತ್ರಗಳನ್ನು ಮೀರಿದ ಕಿವಿಯೆಂಬ ನಾಯಿಯ ಪಾತ್ರವನ್ನು ಮರೆಯುವ ಹಾಗಿಲ್ಲ. ನಿರೂಪಕ ಮತ್ತು ಕಿವಿಯ ನಡುವಿನ ಸಂಬಂಧ ಎಲ್ಲಾ ಮಾನವ ನಿರ್ಮಿತ ಸಂಬಂಧಗಳಿಗೂ ಮೀರಿದ್ದು ಎಂಬುವುದು ನಿಜ. ಕಿವಿಯ ಬುದ್ಧಿ, ಶಿಕಾರಿ ಗುಣ, ನಿರೂಪಕನ ಜೊತೆಗಿನ ಒಡನಾಟ ಇವೆಲ್ಲವನ್ನೂ ನೋಡಿದರೆ 'ನಂಬಿಕೆಗೆ ಅನರ್ಹವಾಗಿರೋ ಹೊಮೋಸೆಪಿಯನ್ ಗಿಂತ ಈ ಕಿವಿಯೇ ಎಷ್ಟೋ ಮೇಲು' ಅನಿಸುತ್ತದೆ.
ಮೂರರ ಮುಂದೆ ಏಳು ಸೊನ್ನೆ ಹಾಕಿದಷ್ಟು ವರ್ಷಗಳ ಹಿಂದಿನಿಂದ ಬದುಕುತ್ತಿರುವ ಈ ಹಾರುವ ಓತಿಯನ್ನು ಹುಡುಕಲು ಕರ್ವಾಲೋ, ಮಂದಣ್ಣ, ನಿರೂಪಕ, ಬಿರಿಯಾನಿ ಕರಿಯಪ್ಪ, ಎಂಗ್ಟ, ಪ್ರಭಾಕರ ಎಲ್ಲರೂ ಸೇರಿ ಮಾಡುವ ಸಾಹಸ ನೋಡಿದರೆ ನಾವು ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತೆ ನನಗೆ ಕಾಣುತ್ತದೆ.
"ನಾವು ಸಾಮಾನ್ಯವೆಂದು ತಿಳಿದಿರುವ ಯಾವುದೂ ಸಾಮಾನ್ಯವಲ್ಲ, ಅವಕ್ಕೆ ಅಸಾಮಾನ್ಯವಾದ ದೃಷ್ಟಿಕೋನವು ಇರುತ್ತದೆ. ನಾವು ಅದನ್ನ ಕಣ್ಣು ಬಿಟ್ಟು ನೋಡೋದನ್ನ ಕಲಿಯಬೇಕು" ಎಂಬುವುದನ್ನು ತೇಜಸ್ವಿಯವರು ಈ ಪಾತ್ರಗಳ ಮೂಲಕ ನಮಗೆ ತಿಳಿಸಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ನೋಡುತ್ತಿದ್ದರೆ "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಕಶ್ಚಿತವಲ್ಲ" ಎಂಬ ಕುವೆಂಪುರವರ ಮಾತು ಎಷ್ಟು ಚೆನ್ನಾಗಿ ಅರ್ಥ ಪಡೆದುಕೊಂಡಿದೆ ಎಂಬುದನ್ನು ಗಮನಿಸಬಹುದು.