ಪಾರ್ಕಿನಲ್ಲಿ ಒಂದೆರಡು ಸುತ್ತು ಬಂದು ಸುಧಾರಿಸಿಕೊಳ್ಳುತ್ತಾ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ, ಬ್ಯಾಂಕಿನವನು ಮಧ್ಯಾಹ್ನ 'ಇಬ್ಬರು ಸಾಕ್ಷಿಗಳದ್ದು ಡೀಟೈಲ್ಸ್ ಕೊಡಬೇಕು ಸಾರ್' ಎಂದು ಕೇಳಿದ್ದು ನೆನಪಾಯ್ತು. ಮೊದ ಮೊದಲು 'ನೀವು ಯಾವ್ದೇ ದಾಖಲೆಗಳನ್ನ ಕೊಡಬೇಕಿಲ್ಲ ಸಾರ್, ನಿಮ್ದು ಒಂದು ಸೈನ್ ಸಾಕು ಒಂದೇ ದಿನದಲ್ಲಿ ಲೋನ್ ಸಿಗತ್ತೆ' ಅನ್ನೊ ಈ ಬ್ಯಾಂಕ್ ಮಂದಿ ಒಂದು ಸಲ ಅರ್ಜಿ ಸಲ್ಲಿಸಿದರೆ ಸಾಕು, 'ಸಾರ್ ನಿಮ್ದು ಆ ದಾಖ್ಲೆದು ಎರಡು ಜೆರಾಕ್ಸ್ ಕೊಡಿ', 'ಇದನ್ನ ಒಂದು ಜೆರಾಕ್ಸ್ ಕೊಡಿ' ಎಂದು ಹೇಳಿ ನಮ್ಮ ತಲೆ ತಿಂದು ಬಿಡುತ್ತಾರೆ.
ಬೈಕ್ ಲೋನ್ ಗೆ ಅರ್ಜಿ ಸಲ್ಲಿಸಿದ್ದ ನನಗೂ ಸಹ ಬ್ಯಾಂಕಿನವನು ಹೀಗೆ ಒಂದು ವಾರ ಮಿದುಳಿಗೆ ಕೈ ಹಾಕಿ ಬಿಟ್ಟಿದ್ದನು. ನನ್ನ ಸಹೋದ್ಯೊಗಿಗಳಲ್ಲೆ ಒಂದಿಬ್ಬರನ್ನು ಸಾಕ್ಷಿಗಳನ್ನಾಗಿ ಕೊಡಬೇಕೆಂದು ಅಂದುಕೊಂಡೆ. ತಕ್ಷಣ ಶ್ರೀನಿವಾಸರಿಗೆ ಕರೆ ಮಾಡಿ ಕೇಳಿದೆ ಅವರು ಹಿಂದು ಮುಂದು ನೋಡದೆ ಒಪ್ಪಿಕೊಂಡರು.
ಸಮಯ ಸುಮಾರು ರಾತ್ರಿ 8.45 ಇರಬಹುದು ನನ್ನ ಇನ್ನೊಬ್ಬ ಸಹೋದ್ಯೋಗಿ ಪ್ರಜೀತ್ ರನ್ನು ಮತ್ತೊಬ್ಬ ಸಾಕ್ಷಿಯನ್ನಾಗಿ ಸೇರಿಸಲು ಅವರನ್ನ ಸಂಪರ್ಕಿಸಿದೆ. ಎಂದಿನಂತೆಯೇ ತಮ್ಮ ಶಾಂತ ಮತ್ತು ಮೃದು ಧ್ವನಿಯಲ್ಲೇ, "ಏನ್ರೀ ರಾತ್ರೋರಾತ್ರಿ ಕಾಲ್ ಮಾಡ್ಬಿಟ್ಟಿದ್ದೀರಾ, ಏನ್ ಸಮಾಚಾರ" ಎಂದು ಮಾತು ಆರಂಭಿಸಿದರು.
"ಏನಿಲ್ಲ ರೀ, ನಿಮ್ಮಿಂದ ಒಂದು ಹೆಲ್ಪ್ ಆಗ್ಬೇಕಿತ್ತು ಅದ್ಕೆ ಕಾಲ್ ಮಾಡ್ದೆ".
"ಏನ್ ಹೇಳ್ರಿ ಸಾಧ್ಯವಾದ್ರೆ ಮಾಡೋಣ".
"ಬೈಕ್ ಲೋನ್ ಗೆ ಅಪ್ಲೈ ಮಾಡಿದ್ದೆ, ಇಬ್ಬರದ್ದು ವಿಟ್ನೆಸ್ ಬೇಕಿತ್ತು, ಶ್ರೀನಿವಾಸ್ ಕೊಟ್ಟಿದ್ದಾನೆ. ನಿಮ್ದು ಸ್ವಲ್ಪ ಡೀಟೈಲ್ಸ್ ಕೊಡಕಾಗುತ್ತಾ?" ಒಂದೇ ಉಸಿರಿಗೆ ನಾನು ಕರೆ ಮಾಡಿದ್ದರ ಉದ್ದೇಶವನ್ನು ಹೇಳಿ ಮುಗಿಸಿದೆ.
"ತಪ್ಪಾಗಿ ತಿಳಿಬೇಡ್ರಿ, ಈಗಾಗಲೇ ನನ್ನದು ಅದು ಇದು ಅಂತ ಏನೇನೋ ತಲೆ ಮೇಲಿದೆ, ಮನೆಲಿ ಕೇಳಿ ಹೇಳ್ತೀನಿ" ಎಂದರು.
ಪ್ರಜೀತ್ ರ ಉತ್ತರದಿಂದ ನನಗೆ ಬೇಜಾರಾಗಿದ್ದರು ಸಹ ಇವರನ್ನ ತಕ್ಕ ಮಟ್ಟಿಗೆ ಅರಿತಿದ್ದ ನಾನು ಮತ್ತೇನು ಪ್ರಶ್ನೆ ಕೇಳದೆ "ಪರ್ವಾಗಿಲ್ಲ ಬಿಡ್ರಿ, ಬೇರೆ ಯಾರ್ರನ್ನಾದ್ರೂ ಕೇಳ್ತೀನಿ" ಎಂದು ಹೇಳಿ ನಮ್ಮ ಸಂಭಾಷಣೆಯನ್ನು ಅಲ್ಲಿಗೆ ಮೊಟಕುಗೊಳಿಸಿದೆ.
ಲೋನ್ ತೆಗೆದು ಕೊಳ್ಳುವ ಸಲುವಾಗಿ ಸಾಕ್ಷಿಗಳ ವಿವರಗಳನ್ನು ಕೊಡುವುದು ಸುಮ್ಮನೆ ಬ್ಯಾಂಕಿನವರ ಸಮಾಧಾನಕ್ಕಾಗಿ ಅನ್ನುವುದು ನನ್ನ ಅಭಿಪ್ರಾಯ. ಕೊಟ್ಟ ವಿವರುಗಳು ಸರಿಯಾಗಿವೆಯೇ ಎಂದು ಇವರು ಎಂದಿಗೂ ಪರೀಕ್ಷಿಸುವುದಿಲ್ಲ ಎಂಬುದನ್ನು ನಾನು ಚೆನ್ನಾಗಿ ತಿಳಿದಿದ್ದೆ. ಸುಮ್ಮನೆ ಏನಾದರೂ ತಕರಾರು ತೆಗೆದು ಸಲ ಕೊಡುವುದಕ್ಕೆ ವಿಳಂಬ ಮಾಡಿ ಬಿಟ್ಟರು ಎಂದು ನಮ್ಮ ಸಂಬಂಧಿಕರಲ್ಲೊಬ್ಬರ ವಿವರವನ್ನು ಅವರ ಒಪ್ಪಿಗೆಯ ಮೇಲೆ ಬ್ಯಾಂಕಿನವರಿಗೆ ಕೊಟ್ಟೆ. ಅಲ್ಲಿಗೆ ನಡೆಯದೆ ಕೊಲೆಗೆ ಸಾಕ್ಷಿಗಳನ್ನು ಹುಡುಕುವ ನನ್ನ ಕೆಲಸ ಮುಗಿದಂತಾಯ್ತು.
ಪ್ರಜೀತ್ ನನಗೆ ತುಂಬಾ ಹಳೆ ಪರಿಚಯವೇನಲ್ಲ ಒಂದೆರಡು ತಿಂಗಳ ಪರಿಚಯವಿದ್ದಿರಬಹುದು ಅಷ್ಟೆ. ಇವರ ಒಳ್ಳೆಯತನದಿಂದಲೋ ಅಥವಾ ಮಲೆಯಾಳಿಯಾದರು ಇವರು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಎಂಬ ಕಾರಣದಿಂದಲೋ ನನಗೂ ಶ್ರೀನಿವಾಸರಿಗೂ ಆತ್ಮಿಯರಾಗಿದ್ದರು. ಐ.ಟಿ ಕಂಪನಿಗಳೆಂಬ ರಣ ಬಿಸಿಲಿನ ಮರುಭೂಮಿಗಳಲ್ಲಿ ಕೆಲಸ ಮಾಡುವ ನಮ್ಮಂತವರಿಗೆ ಕನ್ನಡದವರು, ಕನ್ನಡ ಮಾತನಾಡುವವರು ಸಿಕ್ಕರೆ ಅದು ಮರುಭೂಮಿಯಲ್ಲಿ ಸಿಗುವ ಅಮೂಲ್ಯ ನೀರಿಗೆ ಸಮ. ಪ್ರಜೀತ್ ಮೂಲತಃ ಕೇರಳದವರು ಎಷ್ಟೋ ವರುಷಗಳ ಹಿಂದೆಯೇ ಅವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಯೂರಿದ್ದರು. ಇವರ ಮಾತು ಯಾವಾಗಲೂ ಮೃದು ಮತ್ತು ಆತ್ಮೀಯವಾಗಿರುತ್ತಿದ್ದವು. ನಾನು ಮತ್ತು ಶ್ರೀನಿವಾಸ್ ಒಂದೇ ಓರಿಗೆಯವರು. ಪ್ರಜೀತ್ ನಮಗಿಂತ ಒಂದು ಹತ್ತು ವರುಷ ದೊಡ್ಡವರಾದರೂ ನಮ್ಮನ್ನು ಯಾವತ್ತೂ ಏಕವಚನದಲ್ಲಿ ಮಾತನಾಡಿಸಿದವರೇ ಅಲ್ಲ. ಕೆಲಸದಲ್ಲಿ ನಮಗಿಂತ ಹೆಚ್ಚಿಗೆ ಅನುಭವವಿದ್ದರೂ ಎಂದಿಗೂ ಹಮ್ಮು ತೋರಿಸಿದವರಲ್ಲ. ಇವರು ಇಷ್ಟು ಬೇಗ ನಮ್ಮೊಡನೆ ಆತ್ಮೀಯರಾಗಲು ಇವೆಲ್ಲವೂ ಪರೋಕ್ಷ ಕಾರಣಗಳಿರಬಹುದು ಎಂದು ಕಾಣುತ್ತದೆ.
ಪ್ರಜೀತ್ ತಮ್ಮ ವಿವರ ಕೊಡಲು ಏಕೆ ನಿರಾಕರಿಸಿದರು ಎಂದು ಒಂದೆರಡು ಬಾರಿ ಯೋಚಿಸಿ ನಿದ್ರೆಗೆ ಜಾರಿದೆ.
2
ನಾನು ಆಫೀಸ್ ತಲುಪುವಷ್ಟರಲ್ಲಿ ಒಂದು ಗಂಟೆ ತಡವಾಗಿತ್ತು, ನಿತ್ಯ ಆನ್ ಲೈನಿನಲ್ಲಿ ದಿನಪತ್ರಿಕೆ ಓದುವುದನ್ನು ಅವತ್ತಿಗೆ ಮರೆತು ಆಫೀಸಿನ ಕೆಲಸದತ್ತ ಗಮನಹರಿಸಿದೆ. ಬೆಂಗಳೂರು ಟ್ರಾಫಿಕ್ ನಿಂದಾಗಿ ಆಫೀಸ್ ಗೆ ಹೋಗಿ ಬರಲು ದಿನ ನಿತ್ಯದ ನನ್ನ ಒಟ್ಟು ಪ್ರಯಾಣದ ಸಮಯ ಬರೋಬ್ಬರಿ ಆರೇಳು ಗಂಟೆಗಳು. ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋಗಿ ಬರಬಹುದಾದಷ್ಟು ಸಮಯ. ಬಸ್ಸಿನಲ್ಲಿ ಕುಳಿತು ಕುಳಿತು ಕುಳಿತುಕೊಳ್ಳಲು ಸಹಾಯಕವಾದ ಅಂಗ ಮರಗಟ್ಟಿ ಹೋಗಿತ್ತು. ಅದರಿಂದಲೇ ಆದಷ್ಟು ಬೇಗ ಬೈಕ್ ಕೊಂಡು ಕೊಳ್ಳವ ತರಾತುರಿಯಲ್ಲಿದ್ದೆ.
"ವಿಷಯ ಗೊತ್ತಾಯ್ತೇನ್ರಿ?", ಅಲ್ಲೆ ಇದ್ದ ನನ್ನ ಸಹೋದ್ಯೊಗಿಯೊಬ್ಬರು ಕೇಳಿದರು.
"ಇಲ್ಲ ಕಣ್ರೀ, ಏನ್ ಸಮಾಚಾರ?"
"ಹೂಡಿ ಹತ್ರ ಯಾರದ್ದೊ ಮರ್ಡರ್ ಆಗಿದೆಯಂತೆ!!"
"ಯಾರದ್ದೊ ಮರ್ಡರ್ ಆದ್ರೆ ನೀವ್ಯಾಕ್ರಿ ಇಷ್ಟೊಂದು ಕ್ಯೂರಿಯಾಸಿಟಿ ಇಟ್ಕೊಂಡು ನಂಗೆ ಹೇಳ್ತಿದ್ದೀರ?"
"ಹಂಗಲ್ಲ ಕಣ್ರೀ, ಕೊಲೆಯಾಗಿರೋರು ಯಾರೋ ನಮ್ ಪ್ರಾಜೆಕ್ಟ್ ನವರೇ ಅಂತೆ"
"ಯಾರ್ರೀ ಅದು?"
"ಹೆಸರು ಗೊತ್ತಿಲ್ಲ, ಯಾರೋ ಇತ್ತೀಚೆಗೆ ನಮ್ ಪ್ರಾಜೆಕ್ಟ್ ಸೇರಿದ್ರಂತೆ".
ಇನ್ನೂ ಇವರ ಮುಂದೆ ಪೇಪರ್ ತೆಗೆದು ಕೊಲೆ ವಿಷಯ ಓದುವವರೆಗೂ ಈ ವ್ಯಕ್ತಿ ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ ಎಂಬುದು ಖಾತ್ರಿಯಾಯಿತು. ನನಗೆ ಈ ಕೊಲೆ, ರೇಪ್ ಸಮಾಚಾರಗಳನ್ನ ಓದುವುದಕ್ಕೆ ವಾಕರಿಕೆ ಬರುತ್ತದೆ. ಯಾವುದೇ ನ್ಯೂಸ್ ಪೇಪರ್ ಅಥವಾ ನ್ಯೂಸ್ ಚಾನೆಲ್ ಇರಲಿ ನಿತ್ಯ ಒಂದಾದರು ಇಂತಹ ಪ್ರಕರಣಗಳು ಇದ್ದೇ ಇರುತ್ತವೆ. ಇಂತಹ ವಿಷಯಗಳನ್ನ ವೈಭವಿಕರಿಸಿ ತೋರಿಸುವುದರಲ್ಲಿ ನ್ಯೂಸ್ ಚಾನೆಲ್ ನವರದ್ದೆ ಎತ್ತಿದ ಕೈ ಎನ್ನಬಹುದು. ಇವರ ತಲೆನೋವು ತಡೆಯಲಾರದೆ ಯಾವುದೋ ಇಂಗ್ಲೀಷ್ ಪೇಪರ್ ಅನ್ನು ಆನ್ ಲೈನಿನಲ್ಲಿ ತೆರೆದೆ. "Software company employee found dead near Hoodi" ಎಂಬ ತಲೆ ಬರಹದಲ್ಲಿ ನ್ಯೂಸ್ ಇತ್ತು.
"ಮೂವತ್ತು ವರ್ಷ ವಯಸ್ಸುಳ್ಳ ಪ್ರಜೀತ್ ಆನಂದ್ ಎಂಬ ವ್ಯಕ್ತಿ ಕಳೆದ ರಾತ್ರಿ ಹೂಡಿ ಸರ್ಕಲ್ ಹತ್ತಿರ ಸುಮಾರು 9.30 ರ ಸಮಯಕ್ಕೆ ಕೊಲೆಯಾಗಿದ್ದಾರೆ ಎಂದು ನ್ಯೂಸ್ ಪ್ರಕಟವಾಗಿತ್ತು. ಆ ನ್ಯೂಸ್ ಓದುತ್ತಿದ್ದ ಕ್ಷಣ ನಿಜವಾಗಿಯೂ ನಾನು ದಿಗ್ಭ್ರಮೆಗೊಂಡಿದ್ದೆ.
'ಪ್ರಜೀತ್ ಕೊಲೆ?', 'ಇದು ನಿಜಾನಾ?', 'ಯಾರೋ ಬೇರೆಯವರು ಇರಬೇಕು, ಪ್ರಜೀತ್ ಆಗೋಕೆ ಸಾಧ್ಯನೇ ಇಲ್ಲ', 'ನೆನ್ನೆ ರಾತ್ರಿ ಅವರಿಗೆ ಕಾಲ್ ಮಾಡಿ ಮಾತಾಡಿಸಿದ್ದೀನಿ, ಇವಾಗ ನೋಡಿದ್ರೆ ಕೊಲೆ ಅಂತಾರಲ್ಲ!!' ಹೀಗೆ ಕೆಲವು ಪ್ರಶ್ನೆಗಳು ನನ್ನ ಮನಸಲ್ಲಿ ಹುಟ್ಟುಕೊಂಡವು. ತಕ್ಷಣ ನಾನು ಪ್ರಜೀತ್ ಮೊಬೈಲ್ ಗೆ ಕರೆ ಮಾಡಿದೆ ನೋಡಿದರೆ ಸ್ವಿಟ್ಚ್ ಆಫ್ ಆಗಿದೆ. ವಿಷಯ ಖಾತ್ರಿ ಮಾಡಿಕೊಳ್ಳುವುದಕ್ಕೆ ಪ್ರಜೀತ್ ರ ಹತ್ತಿರ ಸಂಬಂಧಿಕರೇ ಆಗಲಿ, ಸ್ನೇಹಿತರೆ ಆಗಲಿ ನನಗೆ ಯಾರು ಗೊತ್ತಿರಲಿಲ್ಲ. ಶ್ರೀನಿವಾಸರಿಗೆ ಏನಾದರೂ ತಿಳಿದಿರಬಹುದು ಎಂದು ಅವರನ್ನು ವಿಚಾರಿಸಿದೆ ನೋಡಿದರೆ ಅವರಿಗೆ ಕೊಲೆ ವಿಚಾರವೇ ಗೊತ್ತಿರಲಿಲ್ಲ. ಹೀಗೆ ಹೊರಗೆ ನಿಂತು ಶ್ರೀನಿವಾಸ್, ನಾನು ಮತ್ತು ಸಂದೀಪ್ ಚರ್ಚೆ ನಡೆಸುತ್ತಿದ್ದಾಗ ಇದನ್ನು ಕೇಳಿಸಿಕೊಂಡ ಯಾರೋ ಇಬ್ಬರು "ಹೌದು ಕೊಲೆಯಾಗಿರೋದು ನಮ್ ಪ್ರಾಜೆಕ್ಟ್ ಪ್ರಜೀತ್" ಎಂದು ಖಾತ್ರಿ ಮಾಡಿದರು. ಆದರೂ ನಮಗೆಲ್ಲ ಇದು ನಂಬಲಸದಳ ವಿಷಯವಾಗಿತ್ತು. ನಾವು ಮೂರು ಜನರು ಸತತವಾಗಿ ಪ್ರಜೀತ್ ಮೊಬೈಲ್ ಗೆ ಕರೆ ಮಾಡಲು ಪ್ರಯತ್ನಿಸುತ್ತಲೇ ಇದ್ದೆವು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಪಕ್ಷ ಅವರ ಮನೆಯ ಹತ್ತಿರವಾದರು ಹೋಗಿ ವಿಚಾರಿಸೋಣವೆಂದರೆ ಅವರ ಮನೆಯ ವಿಳಾಸವು ನಮಗೆ ತಿಳಿದಿರಲಿಲ್ಲ.
ಕೊಲೆ ವಿಚಾರ ಆಫೀಸಿನಲ್ಲಿ ಎಲ್ಲರಿಗೂ ತಿಳಿಯುತ್ತಿದ್ದಂತೆ ಪ್ರಜೀತ್ ರ ಪರಿಚಯವಿದ್ದವರು 'ಅಯ್ಯೋ ಇಂತ ಒಳ್ಳೆ ಮನುಷಂಗೆ ಹಿಂಗಾಗಬಾರದಿತ್ತು' ಎಂದು ತಮ್ಮ ಸಾಮಾನ್ಯ ನಾಟಕದ ಮಾತುಗಳನ್ನು ಉದುರಿಸಿದರು. ಇನ್ನೂ ಪರಿಚಯವಿಲ್ಲದವರು 'ಯಾರೋ ಪ್ರಜೀತ್ ಅಂತೆ ಕಣ್ರೀ ಪಾಪ ಕೊಲೆಯಾಗೋಗಿದ್ದಾರೆ" ಎಂದು ಮಾತನಾಡಿಕೊಂಡರು.
'ಕಳೆದ ರಾತ್ರಿ 8.30ಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಪ್ರಜೀತ್, ಯಾವುದೋ ಕರೆ ಬಂದ ನಂತರ ಕೂಡಲೇ ಹಿಂತಿರುಗುವುದಾಗಿ ಮನೆಯವರಿಗೆ ಹೇಳಿ ಹೊರ ಹೋಗಿದ್ದಾರೆ.
ಸ್ವಲ್ಪ ಸಮಯದ ನಂತರ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ವ್ಯಕ್ತಿಯ ಕತ್ತಿನ ಬಳಿ ಆಳವಾಗಿ ಸೀಳಲಾಗಿದೆ. ಜೇಬಿನೊಳಗೆ ಸಿಕ್ಕ ದಾಖಲೆಗಳ ಆಧಾರದ ಮೇಲೆ ವ್ಯಕ್ತಿಯ ಸಂಭಂಧಪಟ್ಟವರಿಗೆ ಕೊಲೆಯ ವಿಷಯ ತಿಳಿಸಲಾಯಿತು. ಬೆಲೆ ಬಾಳುವ ವಸ್ತುಗಳೆಲ್ಲಾ ಸತ್ತ ವ್ಯಕ್ತಿಯ ಬಳಿಯೇ ಇರುವುದನ್ನು ನೋಡಿದರೆ ಈ ಕೊಲೆ ದರೋಡೆಗಾಗಿ ಮಾಡಿದಲ್ಲ. ಈಗಾಗಲೇ ಕೆಲವು ಸುಳಿವುಗಳು ಸಿಕ್ಕಿದ್ದು ಆರೋಪಿಗಳನ್ನು ಕೂಡಲೆ ಬಂಧಿಸಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯಲ್ಲಿ ತಿಳಿಸಿದ್ದರು.
ಕೊಲೆ ಮಾಡಿದವರು ಯಾರು? ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ? ಇಂತಹ ಯಾವುದೇ ಪ್ರಶ್ನೆಗಳಿಗೂ ಆ ಸಮಯದಲ್ಲಿ ಉತ್ತರವಿರಲಿಲ್ಲ. ಪೊಲೀಸಿನವರ ಈ ದೊಡ್ಡ ದೊಡ್ಡ ಭಾಷಣಗಳನ್ನು ಕೇಳಿದರೆ ಎಲ್ಲಾ ಕೇಸುಗಳಂತೆಯೇ ಇದು ಸಹ ಹಳ್ಳ ಹಿಡಿಯುವ ಸಂಭವವೇ ಹೆಚ್ಚು ಅಂದುಕೊಂಡೆ.
ಈ ವರದಿಯನ್ನು ಓದಿದ ಮೇಲೆ ನಿಜವಾಗಿಯೂ ನನ್ನ ತಲೆ ಕೆಟ್ಟು ಹೋಗಿತ್ತು. ನೆನ್ನೆ ರಾತ್ರಿ ಸುಮಾರು 8.45 ಸಮಯಕ್ಕೆ ನಾನು ಪ್ರಜೀತ್ ರಿಗೆ ಕರೆ ಮಾಡಿದ್ದೆ. ಪತ್ರಿಕೆಯಲ್ಲಿ ಬಂದಿರುವ ಪ್ರಕಾರ ಅವರು ಸುಮಾರು 8.30ಕ್ಕೆ ಮನೆಗೆ ಬಂದು ತಕ್ಷಣ ಹೊರಗೆ ಹೋಗಿದ್ದಾರೆ. ಸುಮಾರು 9.30 ರ ಸಮಯಕ್ಕೆ ಕೊಲೆಯಾಗಿದೆ. ಅಂದರೆ ಇವಾಗ ನಾನು ನಿಜವಾಗಿಯೂ ಪಿಕಲಾಟದಲ್ಲಿ ಸಿಕ್ಕಾಗಿಕೊಂಡಿದ್ದೀನಿ ಅನ್ನಿಸಿತು. ಕೊಲೆಯಾಗುವುದಕ್ಕೂ 45 ನಿಮಿಷಗಳ ಮುಂಚಿತವಾಗಿ ನಾನು ಕರೆಮಾಡಿದ್ದರಿಂದ ಪೊಲೀಸರು ನನ್ನನ್ನು ಖಂಡಿತವಾಗಿಯೂ ವಿಚಾರಣೆ ಮಾಡುತ್ತಾರೆ ಎನ್ನುವುದು ಮಾತ್ರ ಖಾತ್ರಿಯಾಗಿತ್ತು.
ನಾನು ಪ್ರಜೀತ್ ಗೆ ಕರೆ ಮಾಡಿದ್ದ ವಿಷಯವನ್ನು ಶ್ರೀನಿವಾಸ್ ಮತ್ತು ಸಂದೀಪ್ ಜೊತೆ ಹೇಳಿಕೊಂಡೆ. 'ತಲೆ ಕೇಡಿಸಿಕೊಳ್ಳ ಬೇಡ, ನೀನೇನು ತಪ್ಪು ಮಾಡಿಲ್ವಲ್ಲ, ಪೊಲೀಸರು ವಿಚಾರಣೆಗೆ ಕರೆದ್ರೆ ಹೋಗಿ ಬರೋಣ. ಆಫೀಸಿನಲ್ಲಿ ಪ್ರಜೀತ್ ಗೆ ಹೆಚ್ಚಾಗಿ ಪರಿಚವಿದ್ದದ್ದು ನಾವು ಮೂವರೇ ಹಾಗಾಗಿ ಅವರ ಬಗ್ಗೆ ತಿಳಿದುಕೊಳ್ಳೋಕೆ ನಮ್ಮನ್ನು ವಿಚಾರಣೆ ಮಾಡಬಹುದು, ಹೋಗಣ' ಎಂದು ಸಮಾಧಾನ ಮಾಡಿದರು.
ನನ್ನ ಸೈಕಲ್ ಕಳವಾದಾಗ ಮತ್ತು ಪಾಸ್ ಪೋರ್ಟ್ ವಿಚಾರವಾಗಿ ಒಂದೆರಡು ಸಲ ಪೊಲೀಸ್ ಸ್ಟೇಷನ್ನಿಗೆ ಹೋಗಿದ್ದು ಬಿಟ್ಟರೆ ಎಂದಿಗೂ ನಾನು ಆ ಹಳೆ ಭೂತದ ಬಂಗಲೆಗಳಂತೆ ಕಾಣುವ ಪೊಲೀಸ್ ಸ್ಟೇಷನ್ನುಗಳ ಮುಂದೆ ಓಡಾಡಿದವನಲ್ಲ. ಪಾಸ್ ಪೋರ್ಟ್ ವಿಚಾರದಲ್ಲಿ ಇನ್ನೂರು ರೂಪಾಯಿ ಲಂಚದ ಆಸೆಗಾಗಿ ನಾಲ್ಕು ತಾಸುಗಳ ಕಾಲ ನನ್ನನ್ನು ಸ್ಟೇಷನ್ನಿನಲ್ಲೆ ಇರಿಸಿಕೊಂಡಿದ್ದ ಪೊಲೀಸಿನವರ ಬಗ್ಗೆ ಇಂದಿಗೂ ನನಗೆ ಕೋಪವಿದೆ.
ನಾವು ಮೂರು ಜನರು ಪ್ರಜಿತ್ ರಿಗೆ ಆಪ್ತರೆಂದು ತಿಳಿದ ನಮ್ಮ ಪ್ರಾಜೆಕ್ಟಿನ ದೊಡ್ಡ ತಲೆಗಳು ನಮ್ಮನ್ನು ಕರೆಸಿ 'ಪೊಲೀಸರಿಂದ ವಿಚಾರಣೆಯ ಸಂಬಂಧ ಯಾವುದೇ ಕರೆ ಬಂದರು ಕೂಡಲೇ ನಮಗೆ ತಿಳಿಸಬೇಕೆಂದು' ಹೇಳಿದರು. 'ನೀವೇನು ಹೆದರಬೇಕಿಲ್ಲ ನಾವು ನಿಮ್ಮ ಜೊತೆ ಇದ್ದೀವಿ' ಎಂಬ ಮಾಮೂಲಿ ರಾಗವು ಅವರ ಕಡೆಯಿಂದ ಬಂದಿತು. 'ಸತ್ತಿರೋ ಮನುಷ್ಯಂಗೆ ಒಂದೆರಡು ನಿಮಿಷ ಮೌನಾಚರಣೆ ಸಲ್ಲಿಸೋದ್ ಬಿಟ್ಟು ನಿಮ್ಮ ಬೇಳೆಕಾಳು ಬೇಯಿಸ್ಕೊಳ್ಳೊದನ್ನೇ ನೊಡ್ತಿದ್ದೀರ ಬಡ್ಡಿಮಕ್ಳ' ಎಂದು ಮನಸಲ್ಲೇ ಇವರಿಗೆ ಉಗಿದೆ.
ಪ್ರಜೀತ್ ಗೆ ಸಂಭಂಡಪಟ್ಟವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಅವರ ಅಂತಿಮ ದರ್ಶನವನ್ನು ಪಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ. ಎಲ್ಲಾ ಮುಗಿದ ಮೇಲೆ ಪ್ರಜೀತ್ ಸಹೋದರನ ಸಂಪರ್ಕ ಸಿಕ್ಕಿತ್ತಾದರೂ ಆ ಸಮಯದಲ್ಲಿ ಕರೆಮಾಡಿ ವಿಷಯಗಳನ್ನು ಕೆದಕಿ ಅವರ ಮನಸ್ಸಿಗೆ ನೋವುಂಟು ಮಾಡುವುದು ನಮಗೆ ಬೇಕಿರಲಿಲ್ಲ.
3
ನನಗಂತೂ ಈಗಾಗಲೇ ಪೋಲೀಸಿನವರು ಬೆನ್ನ ಹಿಂದೆಯೇ ಬಿದ್ದಿದ್ದಾರೆ ಎಂದೆನ್ನಿಸುತ್ತಿತ್ತು. ಬೆಳಿಗ್ಗೆಯಿಂದ ಕೊಲೆ ವಿಚಾರವೇ ಮನಸ್ಸಿನಲ್ಲಿ ಇದ್ದುದ್ದರಿಂದ ಆಫೀಸಿನ ಕೆಲಸದ ಕಡೆಗೆ ಗಮನ ಹರಿಸಲು ಸಾಧ್ಯವೇ ಆಗಿರಲಿಲ್ಲ. ಸಂಜೆ ಮನೆಗೆ ಬರುವವರೆಗೂ ಮನಸ್ಸಿನಲ್ಲಿ ಏನೋ ಒಂದು ರೀತಿಯ ತುಮುಲ. 'ಪ್ರಜೀತ್ ನಿಜವಾಗಿಯೂ ಕೊಲೆಯಾಗಿದ್ದಾರೆಯೇ?' 'ನೆನ್ನೆ ನನ್ನ ಜೊತೆ ಮಾತಾಡಿದ ವ್ಯಕ್ತಿ ಇವತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗೋಕೆ ಸಾಧ್ಯವಾ!!' 'ಯಾವ್ದು ನಿಜ?' ಹೀಗೆ ಏನೇನೋ ತಲೆಯಲ್ಲಿ ಸುಳಿದಾಡುತ್ತಿದ್ದವು.
ಬೆಂಗಳೂರು ಎಂಬ ಈ ಮಾಯಾನಗರಿಯೇ ಹೀಗೆ. ಹೊರಗಿನವರಿಗೆ ಸುಂದರವಾಗಿ ಕಾಣುವ ಈ ನಗರ ಇಲ್ಲೆ ವಾಸವಾಗಿರುವ ಜನರಿಗೆ ತನ್ನ ಎಲ್ಲಾ ಮುಖಗಳ ದರ್ಶನವನ್ನು ಮಾಡಿಸಿರುತ್ತದೆ. ಬೆಂಗಳೂರಿನಂತಹ ಎಲ್ಲಾ ಮಹಾನಗರಳಲ್ಲೂ ಕೊಲೆ, ಸುಲಿಗೆ, ಅತ್ಯಾಚಾರಗಳು ಸರ್ವೇ ಸಾಮಾನ್ಯವಾಗಿ ಹೋಗಿವೆ. ಈ ಎಲ್ಲ ಕಷ್ಟಗಳ ನಡುವೆಯೇ ಮಹಾನಗರದ ಮಹಾ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವುದಂತು ಆಶ್ಚ್ರರ್ಯವೇ ಸರಿ.
ಸಂಜೆ ಬಸ್ಸಿನಲ್ಲಿ ಮನೆಗೆ ಬರುವಾಗ ನನಗಂತೂ ಆ ಬಸ್ಸಿನಲ್ಲಿದ್ದ ಪ್ರತಿಯೊಬ್ಬರು ಕೊಲೆಗಡುಕರಂತೆ ಕಾಣತೊಡಗಿದರು. ಒಂದೆಡೆ ಪೋಲೀಸಿನವರು ಎಲ್ಲಿ ಹಿಂದೆ ಬೀಳುತ್ತಾರೆಯೋ ಎಂಬ ಚಿಂತೆಯಾದರೆ, ಇನ್ನೊಂದು ಕಡೆ ಈ ಹಾಳು ಬೆಂಗಳೂರಿನ ಪ್ರತೀ ಜನರನ್ನು ಅನುಮಾನಿಸಿ ನೋಡುವ ಸ್ಥಿತಿಗೆ ಮನಸ್ಸು ತಲುಪಿ ನೆಮ್ಮದಿಯೇ ಇಲ್ಲದಾಗಿತ್ತು.
ಈ ಕೊಲೆ ವಿಷಯವಾಗಿ ಐದಾರು ಗೆಳೆಯರೊಡನೆ ನಾನು ಚರ್ಚಿಸಿದ್ದೆ. ಕೊಲೆಯಾಗುವುದಕ್ಕೂ ನಾಲ್ಕೈದು ದಿನಗಳ ಮುಂಚೆ ಪ್ರಜೀತ್ ನಮ್ಮೊಡನೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದರಿಂದ ನನ್ನ ಕೆಲವು ಸ್ನೇಹಿತರು ಇವರಿಗೆ ಪರಿಚಯವಾಗಿದ್ದರು. 'ಇಂತ ಒಳ್ಳೆ ವ್ಯಕ್ತಿಗೆ ಹಿಂಗಗಬಾರದಿತ್ತು' ಎಂದು ಎಲ್ಲಾರು ನೊಂದಿಕೊಂಡರು. ಪ್ರಜೀತ್ ವ್ಯಕ್ತಿತ್ವವೇ ಹಾಗೆ ನಾವು ಕಂಡ ಮಟ್ಟಿಗೆ ತುಂಬಾ ಒಳ್ಳೆಯ ವ್ಯಕ್ತಿ.
ಪ್ರಜೀತ್ ರವರ ವ್ಯಾಟ್ಸ್ ಅಪ್ ಸ್ಟೇಟಸ್ "Be aware of spy agents" ಬಗ್ಗೆಯೂ ಸಹ ನಾನು ಗೆಳೆಯರೊಡನೆ ಚರ್ಚಿಸಿದ್ದೆ. ಆದರೆ ಪ್ರಜೀತ್ ರ ವ್ಯವಹಾರಗಳ ಬಗ್ಗೆ ಹೆಚ್ಚಾಗಿ ತಿಳಿಯದಿದ್ದ ನಮಗೆ ಹೇಗೆ ತಾಳೆ ಮಾಡಿದರು ಯಾವುದೇ ಸುಳಿವು ಸಿಗಲಿಲ್ಲ. ಅಲ್ಲಿಗೆ ನಮ್ಮ ಖಾಸಗಿ ತನಿಖೆಗೆ ಎಳ್ಳು ನೀರು ಬಿಟ್ಟಂತ್ತಾಯಿತು.
ಕೆಲವು ದಿನಗಳಾಗಿದ್ದರೂ ಪೊಲೀಸರಿಂದ ಯಾವುದೇ ಕರೆ ಬರದಿದ್ದದ್ದು ನನ್ನ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿತ್ತು ಆದರೆ ಇನ್ನೂ ಆರೋಪಿಗಳ ಸುಳಿವೇ ಸಿಕ್ಕಿಲ್ಲದಿದ್ದದ್ದು ಮಾತ್ರ ಚಿಂತೆಯಾಗಿತ್ತು. 'ಆರೋಪಿಗಳನ್ನ ಆದಷ್ಟು ಬೇಗ ಕಂಡು ಹಿಡಿಯುತ್ತೇವೆ' ಎಂದು ಪೋಲೀಸಿನವರು ಅಂದು ಹೇಳಿದ್ದು ಬರೀ ಬೊಗಳೆ ಮಾತುಗಳು ಎಂದುಕೊಂಡೆ ಆದರೆ ಕೆಲವು ಸಂಧರ್ಭಗಳಲ್ಲಿ ತನಿಖೆಗೆ ತೊಂದರೆಯಾಗುತ್ತದೆಂಬ ಉದ್ದೇಶದಿಂದ ಯಾವುದೇ ಸುಳಿವನ್ನು ಪೋಲೀಸಿನವರು ಮಾಧ್ಯಮಕ್ಕೆ ಬಿಟ್ಟು ಕೊಡುವುದಿಲ್ಲ. ಈ ಪ್ರಕರಣದಲ್ಲೂ ಹೀಗೆ ಇದ್ದಿರಬಹುದು ಎಂದೆನ್ನಿಸುತಿತ್ತು.
4
ಆರೇಳು ಗಂಟೆ ಬಸ್ಸಿನಲ್ಲಿ ಕುಳಿತು ಕುಳಿತು ಅಂಡು ನೋಯಿಸಿಕೊಳ್ಳುತ್ತಿದ್ದ ನನಗೆ ಬೈಕ್ ತೆಗೆದುಕೊಂಡಿದ್ದರಿಂದ ಸ್ವಲ್ಪ ಅರಾಮವಾಗಿತ್ತು. ಆರು ಗಂಟೆಗಳ ನನ್ನ ಒಟ್ಟು ಪ್ರಯಾಣದ ಸಮಯ ಕೇವಲ ಮೂರು ಗಂಟೆಗಳಿಗೆ ಇಳಿಯಿತು. ಬಾವಿಗಳಂತೆ ಬಾಯಿ ತೆರೆದು ಕುಳಿತ ಗುಂಡಿಗಳನ್ನು ಹೊಂದಿರುವ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ಚಲಾಯಿಸುವುದು ಮಾತ್ರ ಸಾಹಸದ ಕೆಲಸವೇ ಸರಿ. ಬೇಸಿಗೆ ಕಾಲದಲ್ಲಿ ರಸ್ತೆಯ ಅಗಾಧ ಧೂಳಿನಿಂದ, ವಾಹನಗಳ ಹೊಗೆಯಿಂದ ಸ್ನಾನ ಮಾಡುತ್ತಾ ಬೈಕ್ ಚಲಾಯಿಸಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ.
ಹೀಗೆ ಒಂದು ಬಾರಿ ಸಿಮೆಂಟು ಸಾಗಿಸುವ ಲಾರಿಯ ಹಿಂದೆ ಹೋಗುತ್ತಿರಬೇಕಾದರೆ ಅದು ಉಗುಳುತ್ತಿದ್ದ ಹೊಗೆ ಮತ್ತು ರಸ್ತೆಯ ಧೂಳೆಲ್ಲಾ ನನ್ನ ಮೈ ಮೇಲೆ ಬಿದ್ದು ಮುಖ ಸಂಪೂರ್ಣ ಬೆಂಕಿಯಲ್ಲಿ ಸುಟ್ಟಂತೆ ಕಾಣುತ್ತಿತ್ತು. ಆಫೀಸು ತಲುಪಿದ ಮೇಲೆ ಕರವಸ್ತ್ರದಲ್ಲಿ ಮುಖ ಒರಸಿದಾಗಲೇ ತಿಳಿದದ್ದು, ಬಿಳಿಯ ಕರವಸ್ತ್ರ ತನ್ನ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿಕೊಂಡಿದ್ದು ಕಾಣುತಿತ್ತು.
ಬೈಕ್ ನನ್ನ ಕೈಗೆ ಬಂದು ಕೆಲವು ವಾರಗಳು ಕಳೆದಿದ್ದವು. ಮೊದ ಮೊದಲು ಟ್ರಾಫಿಕ್ ನಲ್ಲಿ ಬೈಕ್ ಚಲಾಯಿಸುವುದು ಕಷ್ಟಕರವಾದರು ಕ್ರಮೇಣ ಒಂದು ಹಂತಕ್ಕೆ ಪರವಾಗಿಲ್ಲ ಎನ್ನಬಹುದಿತ್ತು. ಹಿಂದುಗಡೆಯಿಂದ ಒಂದೆರಡು ವಾಹನಗಳಿಗೆ ಡಿಕ್ಕಿ ಹೊಡೆಯುವುದರ ಮೂಲಕವೋ, ಢಮಾರೆಂದು ಗುಂಡಿಗಳಿಗೆ ಬೈಕ್ ಚಕ್ರ ಇಳಿಸುವುದರ ಮೂಲಕವೋ ತಕ್ಕ ಮಟ್ಟಿಗೆ ರಸ್ತೆಯ ಮೇಲಿನ ದಿನ ನಿತ್ಯದ ನನ್ನ ಸಮರಾಭ್ಯಾಸ ಮುಂದುವರಿಯುತ್ತಲೇ ಇತ್ತು.
ರಾತ್ರಿ ಆಫೀಸಿನಿಂದ ಬೈಕ್ ನಲ್ಲಿ ಹೋರಟ ನಾನು ಮಾರ್ಕೆಟ್ ಫೈ ಓವರ್ ಹತ್ತುತ್ತಿದ್ದ ಹಾಗೆ ಮೊಬೈಲ್ ಪದೇ ಪದೇ ರಿಂಗಾಗ ತೊಡಗಿತ್ತು. ನಾನಂತೂ ಬೈಕ್ ಚಲಾವಣೆ ಮಾಡುವಾಗ ಕನಿಷ್ಠ ಎರಡು ಬಾರಿ ರಿಂಗ್ ಆಗುವವರೆಗೂ ಮೊಬೈಲನ್ನು ಕೈಗೆ ಎತ್ತಿ ಕೊಳ್ಳುವವನೇ ಅಲ್ಲ. ಮನೆಯಿಂದ ಬಂದ ಕರೆಗಳಾದರೆ ಮಾತ್ರ ಅಲ್ಲೇ ಎಲ್ಲಿಯಾದರೂ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮಾತನಾಡಿ ಹೋಗುವುದು. ಬೇರೆ ಕರೆಗಳಾದರೆ ಮನೆ ಅಥವಾ ಆಫೀಸ್ ತಲುಪಿದ ಮೇಲೆಯೇ ಅವಕ್ಕೆ ಉತ್ತರಿಸುತ್ತಿದ್ದದ್ದು.
ಮಾರ್ಕೆಟ್ ಫೈ ಓವರ್ ಚಿಕ್ಕದಾಗಿದ್ದರಿಂದ ಮತ್ತು ವಾಹನ ಸಂಚಾರ ಅತಿಯಾಗಿದ್ದುದರಿಂದ ಬೈಕ್ ನಿಲ್ಲಿಸಲು ಸ್ಥಳವೇ ಇರಲಿಲ್ಲ. ಹಾಗೆ ಮೊಬೈಲ್ ತೆಗೆದು ಇದು ಮನೆಯಿಂದ ಬರುತ್ತಿರುವ ಕರೆಯೆ? ಎಂಬುದನ್ನು ಖಾತ್ರಿ ಮಾಡಿಕೊಂಡೆ. ಸ್ವಲ್ಪ ದೂರ ಬಂದ ನಂತರ ಅಲ್ಲೊಂದು ತಕ್ಕ ಮಟ್ಟಿಗೆ ನಿಲ್ಲಲು ಯೋಗ್ಯವಾದ ಜಾಗ ಕಾಣಿಸಿತು. ಅದು ಟೌನ್ ಹಾಲ್ ಮತ್ತು ಮಾರ್ಕೆಟ್ ಸಿಗ್ನಲ್ ಕಡೆಗಳಿಂದ ಶುರುವಾಗುವ ಫೈ ಓವರ್ ಗಳೆರಡೂ ಸೇರುವ ಜಾಗ ಹಾಗಾಗಿ ಸ್ವಲ್ಪ ವಿಶಾಲವಾಗಿತ್ತು.
ಇದೆ ಸರಿಯಾದ ಜಾಗವೆಂದು ಅಲ್ಲೇ ಬೈಕ್ ನಿಲ್ಲಿಸಿ ಬೈಕ್ ಮೇಲೆ ಕುಳಿತಿದ್ದ ಹಾಗೆಯೇ ಕರೆಯನ್ನು ಸ್ವೀಕರಿಸಿ ಮಾತನಾಡತೊಡಗಿದೆ. 'ಅಜ್ಜಿ ಮನೆಯಲ್ಲಿ ಪೂಜೆ ಇದೆ ಉಟ್ಟಕ್ಕೆ ಅಲ್ಲಿಗೆ ಬಾ' ಎಂದು ಅಮ್ಮ ಅತ್ತಲ್ಲಿಂದ ಹೇಳುತ್ತಿದ್ದರು. ನಾನು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗೆಯೇ ಒಂದು ಬಿ.ಎಂ.ಟಿ.ಸಿ ಬಸ್ಸು ನನ್ನ ಬಳಿಯೇ ಮೈಸೂರು ಸರ್ಕಲ್ ಕಡೆಗೆ ನುಗ್ಗಿತು. ಬಸ್ಸಿನ ಹಿಂದಿನ ಬಾಗಿಲು ನನ್ನ ಬೈಕನ್ನು ಹಾದು ಹೋಗುತ್ತಿದ್ದಾಗೆ ಯಾರೋ ಬಸ್ಸಿನಿಂದ ಜಿಗಿದು ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತುಕೊಡಂತಹ ಅನುಭವವಾಯಿತು. ನಾನು ಹಿಂದಕ್ಕೆ ತಿರುಗಿ ನೋಡಿದೆ ವೇಗವಾಗಿ ಚಲಿಸುತಿದ್ದ ವಾಹನಗಳನ್ನು ಬಿಟ್ಟರೆ ನನಗೆ ಅಲ್ಲಿ ಯಾರು ಕಾಣಿಸಲಿಲ್ಲ. 'ಬರ್ತಿಯೇನೋ?' ಎಂದು ಅಮ್ಮ ಕೇಳಿದಾಗ 'ಹೌದು' ಎಂದು ಉತ್ತರಿಸಿ ಬೈಕ್ ಸ್ಟಾರ್ಟ್ ಮಾಡಲು ಅಣಿಯಾದೆ ಅದೇ ಸಮಯಕ್ಕೆ ನನ್ನ ಗೆಳೆಯೊಬ್ಬರದ್ದು ಮತ್ತೊಂದು ಕರೆ ಬಂದಿತು, ಹೇಗೂ ಬೈಕ್ ನಿಲ್ಲಿಸಿಯಾಗಿದೆ ಮಾತನಾಡಿ ಮುಗಿಸೋಣವೆಂದು ಕರೆ ಸ್ವೀಕರಿಸಿದೆ, ಮಾತನಾಡುತ್ತಿದ್ದಾಗೆ ಮತ್ತೆ ಯಾರೋ ಜಿಗಿದಂತ್ತಾಯಿತು. ನನ್ನ ಪಕ್ಕ ಹಾದು ಹೋದ ಲಾರಿ ದೂರದಲ್ಲಿ ಬೊರ್ರೋ ಎಂದು ಅರಚುತ್ತಾ ಹೋಗುತ್ತಿದ್ದದ್ದು ಬಿಟ್ಟರೆ ಎತ್ತ ತಿರುಗಿ ನೋಡಿದರು ಆ ಸಮಯದಲ್ಲಿ ಮನುಷ್ಯರಾಗಲಿ ವಾಹನಗಳಾಗಲಿ ನನಗೆ ಕಾಣಲಿಲ್ಲ. ವಿಚಿತ್ರ ಅನುಭವ ನೀಡುತಿದ್ದ ಈ ಜಾಗದ ಸಹವಾಸವೇ ಬೇಡವೆಂದು ಅಲ್ಲಿಂದ ಮನೆ ದಾರಿ ಹಿಡಿದೆ.
5
ಕಳೆದ ರಾತ್ರಿ ಫೈ ಓವರ್ ಮೇಲೆ ಆದ ಅನುಭವವನ್ನು ನೆನಪು ಮಾಡಿಕೊಳ್ಳುತ್ತಾ 'ಹೀಗೇಕೆ ಆಯ್ತು?' ಎಂದು ಯೋಚಿಸುತ್ತಿದ್ದೆ. ಯಾವುದೋ ಒಂದು ರೀತಿಯ ಕುತೂಹಲ ಮತ್ತೆ ಆ ಜಾಗಕ್ಕೆ ಹೋಗಿ ಪರೀಕ್ಷಿಸಲು ನನ್ನನ್ನು ಪ್ರೇರೇಪಿಸುತ್ತಿದಂತೆ ಕಾಣುತಿತ್ತು. ಏನಾದರೂ ಆಗಲಿ ಇವತ್ತು ಮನೆಗೆ ಹೋಗುವಾಗ ಪರೀಕ್ಷೆ ಮಾಡಲೇಬೇಕೆಂದು ನಿರ್ಧರಿಸಿದೆ. ರಾತ್ರಿ ಆಫೀಸಿನಿಂದ ಹೊರಟು ಫೈ ಓವರ್ ತಲುಪುತ್ತಿದ್ದಾಗೆ ಮತ್ತೆ ಅದೇ ಜಾಗಕ್ಕೆ ಹೋಗಿ ನಿಂತು ಕೊಂಡೆ. ಬೈಕ್ ನಿಂದ ಇಳಿದು ಆ ಜಾಗದ ಸುತ್ತಲಿನ ಪ್ರದೇಶವನ್ನು ಸೂಕ್ಷವಾಗಿ ಗಮನಿಸಿದೆ. ನನ್ನ ನೇರಕ್ಕೆ ಫೈ ಓವರ್ ಮೈಸೂರು ಸರ್ಕಲ್ ಕಡೆಗೆ ಹಬ್ಬಿಕೊಂಡಿತ್ತು. ಬಲಕ್ಕೆ ನೂರಾರು ಸಣ್ಣ ಸಣ್ಣ ಮನೆಗಳ ಚಾವಣಿಗಳು ಕಾಣುತ್ತಿದ್ದರೆ, ನನ್ನ ಹಿಂದಕ್ಕೆ ಮಾರ್ಕೆಟ್ ಸಿಗ್ನಲ್ ಕಡೆಯಿಂದ ಫೈ ಓವರ್ ಮೇಲೆ ಬರಲು ಒಂದು ರಸ್ತೆ. ಎಡಕ್ಕೆ 'ವಿಕ್ಟೋರಿಯಾ' ಆಸ್ಪತ್ರೆಯ ಒಂದು ಕಟ್ಟಡ ಫೈ ಓವರ್ ಗೆ ಅಂಟುಕೊಂಡಂತೆ ನಿಂತಿತ್ತು. ಇಷ್ಟೆಲ್ಲಾ ಗಮನಿಸಿದ ನನಗೆ ಇದಾವುದರಲ್ಲಿಯೂ ವಿಶೇಷತೆ ಇದೆ ಎನ್ನಿಸಲಿಲ್ಲ.
ತುಂಬಾ ಸಮಯವಾಗಿದ್ದರಿಂದಲೋ ಏನೋ ಫೈ ಓವರ್ ಕೆಳಗೆ ಕೆಲವು ವಾಹನಗಳು ಕೆರ್ರೋ ಪೆರ್ರೋ ಎಂದು ಅರಚುವುದನ್ನು ಬಿಟ್ಟರೆ ಅಂದು ಫೈ ಓವರ್ ಮೇಲೆ ವಾಹನ ಸಂಚಾರ ತುಂಬಾ ವಿರಳವಾಗಿತ್ತು. ಆ ಪ್ರದೇಶದ ಬಗ್ಗೆ ನನ್ನ ಪ್ರಾಥಮಿಕ ತನಿಖೆಯೆಲ್ಲಾ ಮುಗಿದ ಮೇಲೆ ಬೈಕ್ ಮೇಲೆ ಬಂದು ಕುಳಿತೆ. ಒಂದು ಖಾಸಗಿ ಬಸ್ಸು ನನ್ನ ಪಕ್ಕ ಹಾದು ಹೋಗುತ್ತಿದ್ದಾಗೆ ನಾನು ಅಂದುಕೊಂಡಂತೆ ಯಾರೋ ನನ್ನ ಬೈಕ್ ಮೇಲೆ ಜಿಗಿದಂತೆ ಅನುಭವವಾಯಿತು. ನಾನು ತಕ್ಷಣ ನನ್ನ ಕತ್ತು ಮುರಿಯುವಷ್ಟು ರಭಸದಲ್ಲಿ ಸುತ್ತೆಲ್ಲಾ ತಿರುಗಿ ನೋಡಿದೆ ಆದರೆ ಯಾರು ಪತ್ತೆಯೇ ಇಲ್ಲ. ನಾನು ಗಮನಿಸಿದ ಹಾಗೆ ವಿಕ್ಟೋರಿಯಾ ಆಸ್ಪತ್ರೆ ಪಕ್ಕ ಇದ್ದ ಒಂದು ದೊಡ್ಡ ಮರದ ಎಲೆಗಳು ಜೋರಾಗಿ ಅಲುಗಾಡುತ್ತಿದ್ದದ್ದನ್ನು ಬಿಟ್ಟರೆ ಬೇರೆಲ್ಲವೂ ಸಹಜವಾಗಿಯೇ ಇರುವಂತೆ ಕಾಣಿಸಿತು. ಇದೇನು ನನ್ನ ಭ್ರಮೆಯೋ ಅಥವಾ ಪ್ರಜೀತ್ ರ ವಿಚಾರ ತಲೆಯಲ್ಲಿ ಇನ್ನೂ ಸುಳಿದಾಡುತ್ತಿರುವುದರಿಂದ ಹೀಗೆ ಅನ್ನಿಸುತ್ತಿದೆಯೋ ಒಂದು ತಿಳಿಯಲಿಲ್ಲ.
ಮನೆಗೆ ಬಂದ ಮೇಲೆ ಅಮ್ಮನ ಜೊತೆ ಈ ವಿಚಾರವಾಗಿ ಚರ್ಚಿಸಿದೆ. 'ಆಸ್ವತ್ರೆಯ ಶವಗಾರಗಳ ಬಳಿ ಇರುವ ಮರಗಳ ಮೇಲೆಲ್ಲಾ ಪಿಶಾಚಿಗಳು ಯಾವಾಗಲೂ ನೇತಾಡುತ್ತಿರುತ್ತವಂತೆ' ಎಂದು ಯಾರೋ ಇವರಿಗೆ ಹೇಳಿದ್ದಾರೆ. ಹಾಗಾಗಿ ಇವರು ಅಂತಹ ಸ್ಥಳಗಳಲ್ಲಿ ನಿಲ್ಲಬೇಡ ಎಂದು ಬುದ್ಧಿ ಹೇಳಿದರು. 'ಪಿಶಾಚಿಗಳು ನೇತಾಡುವುದು ಯಾಕೆ, ಆರಾಮಾಗಿ ಮರದ ಮೇಲೆ ಕುಳಿತ್ಕೊಬಹುದಲ್ಲ!' ಎಂದು ಮನಸ್ಸಿನಲ್ಲೇ ಅಂದುಕೊಂಡೆ.
ಅಮ್ಮ ಹೇಳಿದ ಮಾತಿಗೂ, ನಾನು ನೋಡಿದಾಗ ಮರದ ಎಲೆಗಳು ಅಲುಗಾಡುತ್ತಿದ್ದುದ್ದಕ್ಕೂ ಯಾವುದೋ ಸಂಭಂಧವಿದೆ ಎಂದು ನಾನು ಹೇಳುವುದಿಲ್ಲ. ಆದರೆ ಪಿಶಾಚಿಗಳಲ್ಲಿ ನಂಬಿಕೆ ಇಲ್ಲದ ನನಗೆ ಆ ಸಮಯದಲ್ಲಿ 'ಇದು ವಿಕ್ಟೋರಿಯಾ ಪಿಶಾಚಿಗಳ ಕೈವಾಡವೇ ಇದ್ದಿರಬಹುದು' ಎಂದೆನಿಸಿದಂತೂ ನಿಜ.
6
ಒಂದೆರಡು ತಿಂಗಳುಗಳ ನಂತರ ಪ್ರಜೀತ್ ಕೊಲೆ ಕೇಸಿನಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ನಾಲ್ಕು ಜನ ಪ್ರಜೀತ್ ರ ಆಪ್ತ ಸ್ನೇಹಿತರೆ ಕೊಲೆಗೈದಿದ್ದರು.
ಕೊಲೆ ನಡೆದ ಅಂದು ರಾತ್ರಿ 8.30ರ ಸಮಯಕ್ಕೆ ಆಗ ತಾನೆ ಕೆಲಸದಿಂದ ಮನೆಗೆ ಬಂದಿದ್ದ ಪ್ರಜೀತ್ ರನ್ನು ಕರೆ ಮಾಡಿ ಹೊರಗೆ ಕರೆಸಿಕೊಂಡ ನಾಲ್ವರು ಸ್ನೇಹಿತರು ಹೂಡಿ ಸರ್ಕಲ್ ಹತ್ತಿರ ಒಂದು ರಸ್ತೆಯಲ್ಲಿ ಡಿಡ್ ಎಂಡ್ ತಲುಪುತ್ತಿದ್ದಾಗೆ ಪ್ರಜೀತ್ ರನ್ನು ಕಾರಿನಿಂದ ಹೊರಗೆ ಎಳೆದು ಕತ್ತಿನ ಬಳಿ ಸೀಳಿ ಕೊಲೆ ಮಾಡಿದ್ದಾರೆ. ನಂತರ ಪ್ರಜೀತ್ ರ ಕಾರಿನಲ್ಲೆ ಎಲ್ಲರೂ ಪರಾರಿಯಾಗಿದ್ದಾರೆ. ಇನ್ನೂ ಜೀವ ಹೋಗದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜೀತ್ 15 ರಿಂದ 20 ಮೀಟರ್ ದೂರ ತೆವಳಿಕೊಂಡು ಹೋಗಿ ಅಲ್ಲೇ ಇದ್ದ ಯಾವುದೋ ಒಂದು ಮನೆಯ ಗೇಟನ್ನು ತಟ್ಟಿದ್ದಾರೆ. ಮನೆಯವರು ಹೊರಗೆ ಬರುವ ವೇಳೆಗಾಗಲೇ ಪ್ರಜೀತ್ ಚರಂಡಿಯೊಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಪತ್ರಿಕೆಯಲ್ಲಿ ತಿಳಿಸಿದ್ದರು.
ಈ ನಾಲ್ವರು ಕೊಲೆಗಾರರಲ್ಲಿ ಒಬ್ಬ ಕೆಲವು ಸಂಧರ್ಭಗಳಲ್ಲಿ ಪ್ರಜೀತ್ ರಿಂದ ಮೂರು ಲಕ್ಷ ರೂಪಾಯಿಗಳನ್ನು ಸಾಲ ಪಡೆದಿದ್ದು ಹಿಂದುರಿಗಿಸಲು ಸಾಧ್ಯವಾಗಿರಲಿಲ್ಲವಂತೆ. ಇದೆ ವಿಷಯಕ್ಕೆ ಇವರ ನಡುವೆ ಈ ಹಿಂದೆಯೂ ಜಗಳವಾಗಿದ್ದು ಕೊಲೆಗೂ ಇದೆ ಕಾರಣವೆನ್ನುವುದು ಪೊಲೀಸರ ಮಾತು.
ನಿಜವಾಗಿಯೂ ಇದೊಂದು ಅಮಾನವೀಯ ಕೃತ್ಯ. ಕೇವಲ ಮೂರು ಲಕ್ಷಗಳಿಗೋಸ್ಕರ ಒಬ್ಬ ವ್ಯಕ್ತಿಯ ಪ್ರಾಣವನ್ನೇ ತೆಗೆಯುವುದೆಂದರೆ ಅವರು ನಿಜವಾಗಿಯೂ ಮನುಷ್ಯರೇ ಅಲ್ಲ. ಸ್ವಲ್ಪ ಜೋರು ಮಾಡಿ ಹೆದೆರಿಸಿದ್ದರು ಸಾಕಿತ್ತು ಪ್ರಜೀತ್ ಮತ್ತೆ ಸಾಲದ ವಿಷಯವನ್ನೇ ಎತ್ತುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ.
ಕೊಲೆ ನಡೆದ ಕೆಲವೇ ತಿಂಗಳುಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸರ ಕಾರ್ಯ ದಕ್ಷತೆ ನಿಜವಾಗಿಯೂ ನನ್ನಲ್ಲಿ ಪೊಲೀಸರ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಲು ಕಾರಣವಾಯಿತು. ಕೆಲವು ನೀಚ ಬುದ್ಧಿಯ ಲಂಚಕೋರ ದರಿದ್ರ ಪೊಲೀಸರಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿರುವುದು ನಿಜವಾದರೂ ಹಲವು ನಿಷ್ಠಾವಂತ ಪೊಲೀಸರು ತಮ್ಮ ಕಾರ್ಯ ದಕ್ಷತೆಯಿಂದ ಜನರ ಮನದಲ್ಲಿ ಉಳಿಯುವುದು ಸಹ ನಿಜ.
ಈ ನಾಲ್ಕು ಕೊಲೆಗಾರರಲ್ಲಿ ಮೂವರು ಅಪ್ರಾಪ್ತರು. ಇಬ್ಬರು ಸುಮಾರು ಹದಿನೇಳು ವಯಸ್ಸಿನವರು, ಒಬ್ಬ ಹದಿನಾರು ವಯಸ್ಸಿನವನು. ಪ್ರಜೀತ್ ರಿಂದ ಸಲ ಪಡೆದಿದ್ದ ಕೊಲೆಯ ಮೊದಲನೇ ಆರೋಪಿಗೆ ಹದಿನೆಂಟು ತುಂಬಿದ್ದರಿಂದ ಅವನನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ, ಉಳಿದ ಮೂವರನ್ನು ಬಾಲಪರಾಧಿಗಳೆಂದು ಪರಿಗಣಿಸಿ ಪೊಲೀಸರು ಬಾಲಪರಾಧಿಗಳ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಮೊದಲಿನಿಂದಲೂ ಪ್ರಜೀತ್ ತನ್ನ ಈ ಸ್ನೇಹಿತರು ಕರೆ ಮಾಡಿದಾಗಲೆಲ್ಲ ಕರೆಯ ಸಂಭಾಷಣೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಇಟ್ಟಿದ್ದರಂತೆ. ಕೊಲೆಯ ಬಳಿಕ ಪ್ರಜೀತ್ ರ ಮೊಬೈಲನ್ನು ವಶಪಡಿಸಿಕೊಂಡ ಪೊಲೀಸರು ರೆಕಾರ್ಡ್ ಆಗಿದ್ದ ಎಲ್ಲಾ ಸಂಭಾಷಣೆಗಳನ್ನು ಕೇಳಿ ಆರೋಪಿಗಳನ್ನು ಪತ್ತೆ ಹಚ್ಚಿ ಇಬ್ಬರನ್ನೂ ಮಧ್ಯಪ್ರದೇಶದಲ್ಲಿ ಹಾಗೂ ಮತ್ತಿಬ್ಬರನ್ನು ಬೆಂಗಳೂರಿನಲ್ಲೇ ಬಂಧಿಸಿದ್ದಾರೆ. ಈ ವಿಷಯ ತಿಳಿದ ಮೇಲೆ 'ಕೇಸಿನ ಬಗ್ಗೆ ವಿಚಾರಣೆಗಾಗಿ ಪೊಲೀಸರು ನನಗೆ ಏಕೆ ಕರೆ ಮಾಡಲಿಲ್ಲ?' ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು.
7
ಪೊಲೀಸರ ತನಿಖೆಯಿಂದ ಕೊಲೆಯ ಆರೋಪಿಗಳೇನೋ ಸಿಕ್ಕಿದ್ದರು ಆದರೆ ಫೈ ಓವರ್ ಗಳ ಮೇಲೆ ಚಲಿಸುವಾಗ ನನ್ನ ಬೈಕ್ ಮೇಲೆ ಜಿಗಿಯುತ್ತಿದ್ದ ಯಾವ ಆಕೃತಿಯು ನನಗೆ ಸಿಗಲಿಲ್ಲ. ಕೆಲವು ಬಾರಿ ಯೋಚಿಸುವಾಗ ವಿಕ್ಟೋರಿಯಾ ಪಿಶಾಚಿಗಳೇ ಹೀಗೆ ಮಾಡುತ್ತಿವೆಯೆನೋ ಎನಿಸುತಿತ್ತು.
ಹೀಗೆ ಒಂದು ಬಾರಿ ಹೆಬ್ಬಾಳ ಫೈ ಓವರ್ ಮೇಲೆ ಬೈಕ್ ನಲ್ಲಿ ನಿಧಾನವಾಗಿ ಚಲಿಸುತ್ತಿದ್ದಾಗ ನನ್ನ ಪಕ್ಕ ದೊಡ್ಡದೊಂದು ಲಾರಿ ಸರ್ರನೆ ಹಾದು ಹೋಗುತ್ತಿದ್ದಾಗೆ ನನಗೆ ಮತ್ತೆ ಅದೇ ಹಳೆಯ ಫೈ ಓವರ್ ಅನುಭವವಾಯ್ತು. ತಕ್ಷಣ ಬೈಕ್ ನಿಲ್ಲಿಸಿ ಸುತ್ತೆಲ್ಲ ಗಮನಿಸಿದೆ ಏನು ಕಾಣಿಸಲಿಲ್ಲ. ವಿಕ್ಟೋರಿಯಾ ಪಿಶಾಚಿಗಳು ಎಲ್ಲಾ ಫೈ ಓವರ್ ಗಳ ಅಕ್ಕ ಪಕ್ಕದ ಮರಗಳಲ್ಲಿ ನೇತಾಡುತ್ತಾ ಕುಳಿತಿವೆಯೆನೋ ಅಂದುಕೊಂಡೆ. ನಾನು ಅಲ್ಲೇ ನಿಂತು ಗಮನಿಸುತ್ತಿದ್ದೆ ಒಂದೆರಡು ಬಸ್ಸುಗಳು, ಒಂದು ಲಾರಿ ನನ್ನ ಬಳಿ ಹಾದು ಹೋದವು. ಪ್ರತೀ ಬಾರಿ ಇಂತಹ ದೊಡ್ಡ ವಾಹನಗಳು ನನ್ನ ಬಳಿ ಹಾದು ಹೋಗುವಾಗಲೂ ನನಗೆ ಆ ವಿಚಿತ್ರ ಅನುಭವವಾಗುತಿತ್ತು.
ಈ ವಿಚಾರವಾಗಿ ಗೆಳೆಯರೊಬ್ಬರೊಡನೆ ಚರ್ಚಿಸಿದೆ. ನನಗಾಗುತ್ತಿದ್ದ ಅನುಭವವನ್ನು ಕೇಳಿದ ಅವರು ಒಂದೇ ಸಮನೆ ನಗುತಿದ್ದರು, 'ಯಾಕ್ರೀ ಹೀಂಗೆ ನಗ್ತಿದ್ದೀರ' ಎಂದು ಕೇಳಿದೆ.
'ಏನ್ರೀ ನೀವು ಇಷ್ಟು ಸಣ್ಣ ವಿಷಯವು ಗೊತ್ತಿಲ್ಲ ಅಂದ್ರೆ ಹೆಂಗೆ?' ಅಂದು ಬಿಡೋದೇ ಈ ಆಸಾಮಿ.
ದೊಡ್ಡ ವಾಹನಗಳು ಗಾಳಿಯನ್ನು ಸೀಳಿಕೊಂಡು ಚಲಿಸುವಾಗ ಅಕ್ಕ ಪಕ್ಕ ಚಲಿಸುವ ಬೈಕ್ ನಂತಹ ಸಣ್ಣ ವಾಹನಗಳನ್ನು ಸ್ವಲ್ಪ ಮಟ್ಟಿಗೆ ಅಲುಗಾಡುವಂತೆ ಮಾಡುತ್ತವಂತೆ ಮತ್ತು ಫೈ ಓವರ್ ಹಲವಾರು ಪಿಲ್ಲರ್ ಗಳ ಮೇಲೆ ನಿಂತಿರುವ ರಸ್ತೆಯಾಗಿರುವುದರಿಂದ ಫೈ ಓವರ್ ಮೇಲೆ ನಾವು ಬೈಕ್ ನಿಲ್ಲಿಸುವ ಜಾಗ ಏನಾದರೂ ಎರಡು ಪಿಲ್ಲರ್ ಗಳ ನಡುವೆ ಇದ್ದಿತ್ತೆಂದರೆ ದೊಡ್ಡ ವಾಹನಗಳು ಫೈ ಓವರ್ ಮೇಲೆ ಚಲಿಸುವಾಗ ಫೈ ಓವರ್ ಕಂಪಿಸಿದಂತಾಗಿ ಬೈಕ್ ಮೇಲೆ ಕುಳಿತಿರುವವರಿಗೆ ಚಲಿಸುತ್ತಿರುವ ಬಸ್ಸಿನಿಂದಲೋ ಅಥವಾ ಲಾರಿಯಿಂದಲೋ ಯಾರೋ ಬೈಕ್ ಮೇಲಕ್ಕೆ ಜಿಗಿದ ಹಾಗೆ ಅನುಭವವಾಗುತ್ತದೆ ಎಂದು ನನ್ನ ಗೆಳೆಯ ತಿಳಿಸಿದರು.
ರಭಸವಾದ ಗಾಳಿಯಿಂದ ಬೈಕ್ ಅಲುಗಾಡುತ್ತದೆ ಎಂದು ನಾನು ತಿಳಿದಿದ್ದೆ ಆದರೆ ಈ ಫೈ ಓವರ್ ಗಳು ಕಂಪಿಸುವ ವಿಚಾರ ಮಾತ್ರ ನನಗೆ ತಿಳಿದಿರಲಿಲ್ಲ. ಇದು ನಿಜವೇ ಎಂದು ಪರೀಕ್ಷಿಸಲು ನಾನು ಒಂದು ದಿನ ಮಾರ್ಕೆಟ್ ಫೈ ಓವರ್ ಮೇಲೆ ಅಂದು ನನಗೆ ವಿಚಿತ್ರ ಅನುಭವ ನೀಡುತ್ತಿದ್ದ ಆ ಜಾಗ ಎಲ್ಲಿ ಬರುತ್ತದೆಂದುದು ನೋಡಿದೆ, ಆ ಜಾಗ ಸರಿಯಾಗಿ ಎರಡು ಪಿಲ್ಲರ್ ಗಳ ನಡುವೆ ಬರುತ್ತಿತ್ತು. ಹಾಗೆ ಒಂದು ಅರ್ಧ ಗಂಟೆ ಬೈಕ್ ಮೇಲೆ ಕುಳಿತು ದೊಡ್ಡ ದೊಡ್ಡ ವಾಹನಗಳು ನನ್ನ ಬೈಕ್ ಅನ್ನು ಹಾದು ಹೋಗುವಾಗಲೆಲ್ಲ ಗಮನಿಸಿದೆ ನನ್ನ ಗೆಳೆಯ ಕೊಟ್ಟ ಎರಡು ಕಾರಣಗಳು ನನಗೆ ಅನುಭವವಾಗಿ ಕಾಣಿಸುತಿತ್ತು. ಅಲ್ಲಿಗೆ ಗೆಳೆಯ ಹೇಳಿದ್ದು 100% ನಿಜ ಅನ್ನಿಸಿತು.
ಅಂತೂ ಕೊನೆಗೂ ವಿಕ್ಟೋರಿಯಾ ಪಿಶಾಚಿಗಳಿಂದ ಮುಕ್ತಿ ಸಿಕ್ಕಿತು ಎಂದುಕೊಂಡೆ. ಎಲ್ಲವನ್ನೂ ಅಮ್ಮನಿಗೂ ಹೇಳಿದೆ ಅವರು "'ಹೌದಾ ನಿಜಾನಾ?' ಎಂದು ಮತ್ತೆ ನನಗೆ ಪ್ರಶ್ನೆ ಹಾಕಿದರು.
****************
No comments:
Post a Comment