ಗುಡ್ಡೆ ಬಸವ
೧
೧
ಆಫೀಸಿಗೆ ರಜೆ ಹಾಕಿ ಸುಮಾರು ದಿನಗಳ ನಂತರ ನಾನು ನನ್ನ ಹುಟ್ಟೂರಿಗೆ ಬಂದಿದ್ದೆ. ಇದೇ ಖುಷಿಯಲ್ಲಿ ನಮ್ಮಜ್ಜಿ ಕೋಳಿ ಸಾರು ರಾಗಿ ಮುದ್ದೆ ಮಾಡಿ ಊಟಕ್ಕೆ ಬಡಿಸಿ ಮಂಚದ ಮೇಲೆ ಕುಳಿತ್ತಿದ್ದರು. ನಾನು ಒಂದೊಂದೆ ತುತ್ತನ್ನ ಸವಿಯುತ್ತ ಊಟ ಮಾಡುತ್ತಿದ್ದೆ. ಅದೇ ಸಮಯಕ್ಕೆ ಹೊರಗಿನಿಂದ ಯಾರೋ ನನ್ನ ಹೆಸರನ್ನು ಕೂಗಿದ ಹಾಗೆ ಕೇಳಿಸಿತು. ಯಾರು ಕೂಗುತ್ತಿದ್ದಾರೆ ನೋಡೋಣವೆಂದು ನಾನು ಎದ್ದು ಹೊರಗೆ ಬರುವುದರಲ್ಲಿದ್ದೆ ಅಷ್ಟರಲ್ಲಿ ನಮ್ಮಜ್ಜಿ "ಅದ್ಯಾರು ಅಂತ ನಾನು ನೋಡ್ತಿನಿ, ನೀನು ಊಟ ಮಾಡು" ಎಂದು ಹೇಳಿ ಹೊರಗೆ ಬಂದರು. ಕೋಳಿ ಸಾರು ಬಿಟ್ಟು ಬರಲು ಮನಸ್ಸಿಲ್ಲದ ನಾನು ಅಲ್ಲೆ ಊಟ ಮುಂದುವರೆಸಿದೆ.
ಹೊರಗೆ ನಮ್ಮಜ್ಜಿ ಜೊತೆ ಯಾರೋ ಏರು ಧ್ವನಿಯಲ್ಲಿ ಮಾತನಾಡುತ್ತಿರುವುದು ಕೇಳಿಸುತ್ತಿತ್ತು ಆದರೆ ಏನು ಮಾತು ಎಂದು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ಆ ಧ್ವನಿ ಕೇಳಿದರೆ ಅದು ನಮ್ಮ ಮನೆ ಪಕ್ಕದ ಮನೆಯ ಶಂಕ್ರಣ್ಣನ ಧ್ವನಿಯೆಂದು ತಿಳಿಯುತ್ತಿತ್ತು. ಹೊರಗೆ ಪಡಸಾಲೆಯಲ್ಲಿ ನಮ್ಮಜ್ಜಿ 'ಅವ್ನು ಇವಾಗ ಬೆಂಗ್ಳೂರಿಂದ ಬಂದು ಊಟ ಮಾಡ್ತಾವ್ನೆ, ಅಮ್ಯಾಲೆ ಬತ್ತನೆ ಇರು' ಎಂದು ಶಂಕ್ರಣ್ಣನಿಗೆ ಹೇಳುತ್ತಿರುವು ಕೇಳಿಸಿತು ಅಷ್ಟರಲ್ಲಿ ಏನು ವಿಷಯ ಕೇಳೋಣವೆಂದು ಊಟ ಅರ್ಧಕ್ಕೆ ನಿಲ್ಲಿಸಿ ಹೊರಗೆ ಬಂದ ನಾನು
"ಏನ್ ಶಂಕ್ರಣ್ಣ ಏನ್ ಸಮಾಚಾರ" ಎಂದು ಕೇಳಿದೆ.
"ನೀವ್ ಪ್ಯಾಟೆಯಿಂದ ಬಂದಿದೀರ ಅಂತ ಗೊತ್ತಾಯ್ತು ಅದ್ಕೆ ನೋಡ್ಕೊಂಡು ಹೋಗುಮ ಅಂತ ಬಂದೆ" ಎಂದು ಶಂಕ್ರಣ್ಣ ಹೇಳಿದ. ಆದರೆ ಆತನನ್ನು ಗಮನಿಸಿದರೆ ಬರೇ ನನ್ನನ್ನು ನೋಡಿಕೊಂಡು ಹೋಗಲು ಬಂದಿರುವವನ ಹಾಗೆ ಕಾಣಿಸುತ್ತಿರಲ್ಲ ಬೇರ ಏನೋ ಹೇಳಲು ಚಡಪಡಿಸುತ್ತಿರುವ ಹಾಗೆ ಕಾಣಿಸಿತು. ಇದನ್ನು ತಿಳಿದ ನಾನು "ಅದೇನ್ ಹೇಳು ಶಂಕ್ರಣ್ಣ ನಾಚ್ಕೆ ಯಾಕೆ?" ಎಂದೆ.
ನಮ್ಮಜ್ಜಿ ಅಲ್ಲೆ ನಿಂತುಕೊಂಡಿದ್ದರಿಂದಲೋ ಏನೋ ಶಂಕ್ರಣ್ಣ ಮಾತನಾಡಲು ಹಿಂಜರಿಯುತ್ತಿದ್ದ. ನಾನು ಹೀಗೆ ಒಮ್ಮೆ ಶಂಕ್ರಣ್ಣನ ಜೊತೆ ನಮ್ಮೂರಿನ ಬೆಟ್ಟ ಹತ್ತಲು ಹೋಗಿ ಮುಳ್ಳು ಚುಚ್ಚಿಸಿಕೊಂಡು ಬಂದಿದ್ದೆ. ಇದಕ್ಕೆ ನಮ್ಮಜ್ಜಿ "ಮಗಿನ ಬೆಟ್ಟುಕ್ ಕರ್ಕೊಂಡೋಗಿ ಮುಳ್ಳು ಚುಚ್ಚಿಸ್ಕೊಂಡು ಬಂದಿದೀಯ" ಎಂದು ಶಂಕ್ರಣ್ಣನಿಗೆ ಬೈದಿದ್ದರು ಅದಕ್ಕಾಗಿ ಅವನು ಅಜ್ಜಿ ಮುಂದೆ ಏನಾದರೂ ಹೇಳಬೇಕಾದರೆ ಹಿಂಜರಿಯುತ್ತಿದ್ದ.
"ಅದನ್ ಕೇಳ್ಕೊಂಡ್ ಬಂದು ಊಟ ಮಾಡು" ಎಂದು ಹೇಳಿ ಅಜ್ಜಿ ಮನೆಯೊಳಗೆ ಹೋದರು. ಅವರು ಒಳ ಹೋಗುತ್ತಿದ್ದಂತೆ ಇತ್ತ ಶಂಕ್ರಣ್ಣ "ಅಯ್ಯ, ತಲೆ ಬರುಡೆ ತವ ಗಾಯ ಮಾಡ್ಕೊಂಡು ತಿರುಗ್ತಿತ್ತಲ್ಲ ಗುಡ್ಡೆ ಬಸವ ಅದು ಇವತ್ತು ಮಾರಿಗುಡಿ ಬೈಲಲ್ಲಿ ಸತ್ತೊದಂಗೆ ಬಿದ್ದದೆ. ಅದ್ನೆ ಹೇಳುಮ ಅಂತೆ ಬಂದೆ" ಅಂದ.
ಕಳೆದ ಬಾರಿ ಸುಮಾರು ಐದಾರು ತಿಂಗಳ ಹಿಂದೆ ನಾನು ಊರಿಗೆ ಬಂದಿದ್ದಾಗ ನಾನು ಶಂಕ್ರಣ್ಣ ಸೇರಿಕೊಂಡು ಈ ಬಸವನನ್ನ ಕಟ್ಟಿ ಎಳೆದುಕೊಂಡೊಗಿ ಪಶುವೈದ್ಯ ಆಸ್ಪತ್ರೆಯಲ್ಲಿ ಕೊಂಬಿನ ಬಳಿ ಅದಕ್ಕಾಗಿರುವ ಗಾಯಕ್ಕೆ ಒಂದಿಷ್ಟು ಔಷದ ಹಾಕಿಸಿ ಉಪಚಾರ ಮಾಡಿದ್ದೆವು.
ನಮ್ಮೂರಿನ ಗುಡ್ಡದ ಮೇಲಿರುವ ದೇವರಿನ ಹೆಸರಲ್ಲಿ ಬಿಟ್ಟಿರುವ ಈ ಬಸವನನ್ನು ನಮ್ಮೂರಿನ ಜನರು "ಗುಡ್ಡೆ ಬಸವ" ಎಂದು ಕರೆಯುತ್ತಿದ್ದರು. "ಬಸವ ಬಿಡುವುದು" ಎನ್ನುವುದು ಒಂದು ರೀತಿಯ ಸಂಪ್ರದಾಯ. ಸಣ್ಣ ವಯಸ್ಸಿನ ಒಂದು ಹೋರಿಯನ್ನು ದೇವರ ಹೆಸರಿನಲ್ಲಿ ಊರೂರು ತಿರುಗಲು ಬಿಡುತ್ತಾರೆ. ಹೀಗೆ ಊರೂರು ತಿರುಗಿ ಸಿಕ್ಕ ಸಿಕ್ಕ ಹೊಲ ಗದ್ದೆಗಳಲ್ಲಿ ಮೇವು ಸಂಪಾದಿಸಿ ಬದುಕುವ ಈ ಹಸುವನ್ನು ಬಸವ ಎಂದು ಕರೆಯುತ್ತಾರೆ. ಹೀಗೆ ನಮ್ಮೂರಿನ ಗುಡ್ಡದ ಮೇಲಿರುವ ದೇವರಿಗೆ ಬಿಟ್ಟಿರುವ ಬಸವನೇ "ಗುಡ್ಡೆ ಬಸವ". ಈ ಬಸವಗಳಿಂದ ಯಾರಿಗೂ ಏನು ಉಪಯೋಗವಿಲ್ಲ, ರಾತ್ರಿ ಸಮಯದಲ್ಲಿ ದೇವರು ಆ ಬಸವನ ಮೇಲೆ ಸಂಚಾರ ಮಾಡುತ್ತಾನೆ ಎಂಬ ನಂಬಿಕೆಯಿಂದ ಜನರು ಹೀಗೆ ಒಂದೊಂದು ದೇವರ ಹೆಸರಲ್ಲಿ ಒಂದೊಂದು ಬಸವ ಬಿಡುತ್ತಾರೆ.
ಕಳೆದ ಹಲವಾರು ವರ್ಷಗಳಿಂದ ಗುಡ್ಡೆ ಬಸವ ಅಲ್ಲಿ ಇಲ್ಲಿ ತಿಂದು ಕಟ್ಟು ಮಸ್ತಾದ ಮೈ ಬೆಳಸಿಕೊಂಡು ಆರಾಮವಾಗಿತ್ತು. ಈ ಗುಡ್ಡೆ ಬಸವನಿಗೆ ಕಳೆದ ಒಂದು ವರುಷದಿಂದ ತಲೆಯ ಮೇಲೆ ಎರಡು ಕೊಂಬುಗಳ ನಡುವೆ ಸಣ್ಣ ಗಾಯವಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ಇವಾಗ ಆ ಗಾಯ ಕೊಳೆತು ದೊಡ್ಡದಾಗಿ ಹುಳುಗಳು ಕಾಣಿಸುತ್ತಿದ್ದವು. ಅದಕ್ಕಾಗಿಯೇ ಕಳೆದ ಬಾರಿ ನಾವು ಗಾಯಕ್ಕೆ ಸ್ಪಲ್ಪ ಔಷದ ಹಾಕಿಸಿದ್ದೆವು. ಇಷ್ಟೆಲ್ಲಾ ಕಾರಣ ಇದ್ದುದ್ದರಿಂದಲೇ ನಾನು ಬೆಂಗಳೂರಿನಿಂದ ಬಂದಿರುವ ವಿಷಯ ತಿಳಿದ ಶಂಕ್ರಣ್ಣ ಗುಡ್ಡೆ ಬಸವನ ಬಗ್ಗೆ ತಿಳಿಸಲು ನಮ್ಮ ಮನೆಯ ಹತ್ತಿರ ಬಂದಿದ್ದ.
"ನಡಿರಿ ಅಯ್ಯ ಮಾರಿಗುಡಿ ಬೈಲಿಗೆ ಹೊಗಿದ್ದು ಬರುಮ" ಎಂದು ಶಂಕ್ರಣ್ಣ ನನ್ನನ್ನು ಕರೆದ.
ಅದಕ್ಕೆ ನಾನು, "ಊಟ ಮಾಡ್ಕೊಂಡು ಹೋಗಣ, ನೀನು ಬಾ ಊಟ ಮಾಡು" ಎಂದು ಕರೆದೆ. ಅದಕ್ಕವನು ಈಗಾಗಲೇ ನನ್ನದು ಊಟವಾಗಿದೆ ಎಂದ ಹೇಳಿ ನಾನು ಎಷ್ಟು ಕರೆದರೂ ಊಟ ಮಾಡಲು ಒಪ್ಪಲೇ ಇಲ್ಲ. "ನಿಮ್ಯಾಲೆ ಆಣೆಗೂ ನಂದು ಊಟ ಆಗೈತೆ ಕಣ್ರಯ್ಯ" ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿಬಿಟ್ಟ.
ನಾನು ಸರಸರೆನೆ ಊಟ ಮುಗಿಸಿ ನಮ್ಮ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿದ್ದ ಮಾರಿಗುಡಿ ಬೈಲಿನ ಕಡೆಗೆ ಶಂಕ್ರಣ್ಣನ ಜೊತೆ ಹೊರಟೆ. ನಾವು ಬಯಲನ್ನು ತಲುಪುತ್ತಿದ್ದಾಗೆ ಬಯಲಿನ ಒಂದು ಮೂಲೆಯಲ್ಲಿ ಮಾರಿಗುಡಿಗೆ ಸ್ವಲ್ಪ ಹತ್ತಿರದಲ್ಲಿ ಗುಡ್ಡೆ ಬಸವ ಮಲಗಿರುವುದು ಕಾಣಿಸಿತು. ದೂರದಿಂದ ನೋಡುತ್ತಿದ್ದ ನಮಗೆ ಈ ಬಸವ ಆಗಾಗ್ಗೆ ತನ್ನ ಕಿವಿಯನ್ನು ಬಡಿದುಕೊಳ್ಳುವುದು ಕಾಣಿಸಿದ್ದು ಬಿಟ್ಟರೆ ದೇಹದ ಯಾವ ಭಾಗದಲ್ಲೂ ಸ್ವಲ್ಪವೂ ಚಲನೆ ಕಾಣಿಸಲಿಲ್ಲ. ಕಿವಿಯ ಚಲನೆ ಇಲ್ಲದಿದ್ದರೆ ಈ ಬಸವ ಸತ್ತಿದೆ ಎಂದು ದೂರದಿಂದ ನೋಡಿದ ಯಾರು ಬೇಕಾದರೂ ಹೇಳ ಬಹುದಿತ್ತು.
ಬಸವ ಮಲಗಿದ್ದ ಜಾಗಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಮುದುಕ ಮರದ ನೆರಳಿನಲ್ಲಿ ಕುಳಿತುಕೊಂಡು ಬಸವನ ಕಡೆಗೆ ಆಗಾಗ್ಗೆ ಏನನ್ನೋ ಎಸೆಯುತ್ತಿದ್ದ. ಇದನ್ನು ನೋಡಿದ ನಾನು ತಕ್ಷಣ ಅಲ್ಲೆ ನಿಂತುಕೊಂಡೆ. ಶಂಕ್ರಣ್ಣ ಏನನ್ನೊ ಒಬ್ಬನೆ ಮಾತನಾಡುತ್ತ ಮುದುಕನ ಕಡೆಗೆ ಹೊರಟ. ನಾನು ಈ ಮುದುಕ ಹೀಗೆಕೆ ಮಾಡುತ್ತಿದ್ದಾನೆ ಎಂದು ಸೂಕ್ಷವಾಗಿ ಗಮನಿಸುತ್ತ ನಿಂತುಕೊಂಡೆ. ಹಲವಾರು ಕಾಗೆಗಳು ಬಸವನ ತಲೆಯ ಮೇಲೆ ಕುಳಿತು ಗಾಯವನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಗಾಯದಲ್ಲಿರುವ ಹುಳುಗಳು ಹಾಗೂ ಗಾಯದ ಸುತ್ತಲಿನ ಮಾಂಸವನ್ನು ಹೆಕ್ಕಿಕೊಂಡು ಹೋಗುತ್ತಿದ್ದವು. ಕೆಲವು ಕಾಗೆಗಳಂತೂ ಬಸವನ ಬಾಲ ಮತ್ತು ಕಾಲುಗಳ ಮೇಲೆಲ್ಲಾ ಎರಗಿ ಮನಬಂದಂತೆ ಕುಕ್ಕುತಿದ್ದವು. ಇಷ್ಟೆಲ್ಲಾ ಆಗುತ್ತಿದರು ಬಸವ ಮಾತ್ರ ಕಿವಿಯನ್ನು ಆಗಾಗ್ಗೆ ಬಡಿಯುತ್ತ ಕೆಲವು ಪುಕ್ಕಲು ಕಾಗೆಗಳನ್ನು ಓಡಿಸಲು ಮಾತ್ರ ಆಗುತ್ತಿತ್ತು ಉಳಿದಂತೆ ಕೆಲವು ಹಠಮಾರಿ ಕಾಗೆಗಳಂತು ಒಂದಷ್ಟು ಮಾಂಸದ ತುಣುಕಿಲ್ಲದೆ ಅಲ್ಲಿಂದ ಕದಡುತ್ತಿರಲಿಲ್ಲ. ಈ ಕಾಗೆಗಳನ್ನು ಓಡಿಸಲೆಂದೆ ಆ ಮುದುಕ ಮರದ ಕಡೆಯಿಂದ ಆಗಾಗ್ಗೆ ಕಲ್ಲುಗಳನ್ನು ಬಸವ ಮಲಗಿರುವ ಕಡೆಗೆ ಎಸೆಯುತ್ತಿದ್ದ.
ಶಂಕ್ರಣ್ಣ ಹೇಳಿದ ಹಾಗೆ ಬಸವ ಕಳೆದ ಕೆಲವು ದಿನಗಳಿಂದ ಏನನ್ನೂ ತಿನ್ನದೆ ಬಯಲಿನಲ್ಲೆ ಮಲಗಿ ತುಂಬಾ ಸೊರಗಿಹೊಗಿತ್ತು. ಹಾಗಾಗಿಯೇ ಕಾಗೆಗಳು ಇಷ್ಟು ಕ್ರೂರವಾಗಿ ವರ್ತಿಸುತ್ತಿದ್ದರು ಸಹ ಪ್ರತಿರೋಧ ಒಡ್ಡದೇ ಸುಮ್ಮನೆ ಮಲಗಿತ್ತು. ಬಹುಶಃ ನನಗೆ ಕ್ರೂರವಾಗಿ ಕಂಡ ಈ ಕಾಗೆಗಳು ಬಸವನಿಗೆ ಈ ಲೋಕದಿಂದ ತನ್ನನ್ನು ಕರೆದುಕೊಂದು ಹೋಗಲು ಬಂದಿರುವ ಯಮನಾಗಿಯೋ ಅಥವಾ ದೇವರಾಗಿಯೋ ಕಂಡಿರಬಹುದು.
೨
ಕಣ್ಣ ಮುಂದೆ ನಡೆಯುತ್ತಿದ್ದ ಕ್ರೂರ ಪ್ರಪಂಚದ ಆಟಗಳನ್ನ ನೋಡುತ್ತ ನಿಂತಿದ್ದ ನನಗೆ, "ಅಯ್ಯಾ ಅಲ್ಲೇನ್ ಮಾಡ್ತಿದೀರ? ಚಾಮಯ್ಯ ಕರಿತಾವ್ನೆ ಬನ್ನಿ ಇತ್ಲಾಗೆ" ಅಂತ ಶಂಕ್ರಣ್ಣ ಮುದುಕ ಕುಳಿತಿದ್ದ ಮರದ ಕಡೆಯಿಂದ ಕೂಗುತ್ತಿದ್ದದ್ದ ಸಣ್ಣದಾಗಿ ಕೇಳಿಸತೊಡಗಿತು. ಶಂಕ್ರಣ್ಣನ ಕೂಗಿಗೆ ಪ್ರತಿಕ್ರಿಯೆಯಾಗಿ ನನ್ನ ಕಾಲುಗಳು ಮರದ ಕಡೆಗೆ ನನನ್ನು ಕರೆದುಕೊಂಡು ಹೋದವು.
ಮರದ ಬಳಿ ಬರುತ್ತಿದ್ದಹಾಗೆ ಅಲ್ಲಿರುವ ಮುದುಕ ಚಾಮಯ್ಯನೆಂದು ನನಗೆ ಸ್ಪಷ್ಟವಾಯಿತು. ಇವನೊಬ್ಬ ರಿಟೈರ್ಡ್ ಸರ್ಕಾರಿ ನೌಕರ. ನಮ್ಮೂರಿನ ಗುಡ್ಡದ ಸುತ್ತ ಮುತ್ತಲು ಹಬ್ಬಿಕೊಂಡಿರುವ ಕಾಡನ್ನು ನೋಡಿಕೊಳ್ಳುತ್ತಿದ್ದ ಫಾರೆಸ್ಟ್ ಗಾರ್ಡ್ ಆಗಿ ಸುಮಾರು ವರುಷಗಳ ಕಾಲ ಕೆಲಸ ಮಾಡಿದ್ದ. ಆತನ ಕಾಲಕ್ಕೆ ಹುಲಿಯಿಂದ ಒಬ್ಬಳು ಹೆಂಗಸನ್ನು ರಕ್ಷಿಸಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದ. ಸರ್ಕಾರಿ ಸೇವೆ ಮುಗಿದ ನಂತರ ಹೆಂಡತಿ ಮಕ್ಕಳು ಇಲ್ಲದ ಈತ 'ಮನೆ ಮನೆ ಮುದ್ದೆ ಮಾರಿಗುಡಿ ನಿದ್ದೆ' ಎಂಬಂತೆ ಕಾಲ ಕಳೆಯುತ್ತಿದ್ದ. ಚಾಮಯ್ಯನಿಗೆ ವಯಸ್ಸಾಗಿ ಬಡಕಲಾಗಿದ್ದರಿಂದ ಹಾಗೂ ನಾನು ಅವನನ್ನು ನೋಡಿ ತುಂಬಾ ದಿನಗಳಾಗಿದ್ದರಿಂದ ಮೊದ ಮೊದಲು ಆತನ ಗುರುತ್ತೆ ಸಿಕ್ಕಿರಲಿಲ್ಲ. ಕಳೆದ ಬಾರಿ ನಾನು ಊರಿಗೆ ಬಂದಾಗಲೂ ಚಾಮಯ್ಯ ಕಾಣಿಸಿರಲಿಲ್ಲ ಈ ಬಗ್ಗೆ ಶಂಕ್ರಣ್ಣನನ್ನು ಕೇಳಿದ್ದಕ್ಕೆ ಅವನು "ನಡ್ದಾಡೊ ದೇವುಕ್ಕು ದೇವರ್ಗೂ ನೆಲೆವುಂಟೆ ಅಯ್ಯ?" ಎಂದು ಹೇಳಿ ಸುಮ್ಮನಾಗಿದ್ದ.
ನಾನು ಚಾಮಯ್ಯನ ಹತ್ತಿರಕ್ಕೆ ಹೋದಾಗ ಅವನು ಸಹ ನನ್ನ ಗುರುತು ಹಿಡಿಯಲಿಲ್ಲ. ಹಾಗೆಯೇ "ಯಾರೋ ಇವ್ರು ಶಂಕ್ರ ಪ್ಯಾಟೆಯೋರ್ ಕಂಡಂಗ್ ಕಾಣ್ತಾವ್ರೆ. ಯಾರ್ ಬುದ್ಧಿ ನೀವು?" ಎಂದು ನನ್ನನ್ನೆ ಕೇಳಿದ.
ನಾನು ಏನು ಉತ್ತರ ನೀಡದೆ ಬಸವನನ್ನು ನೋಡುತ್ತಾ ನಿಂತಿದ್ದೆ.
"ಮ್ಯಾಗ್ಳಟ್ಟಿ ಅಯ್ಯರ ಮ್ಮೊಮ್ಮಗ ಕಣಯ್ಯ" ಎಂದು ಶಂಕ್ರಣ್ಣ ಚಾಮಯ್ಯನ ಪ್ರಶ್ನೆಗೆ ಉತ್ತರಿಸಿದ.
"ಹೋ ಸಣ್ಣಯ್ಯೋರು ಹೆಂಗಿದಿರಿ?" ಎಂದು ಚಾಮಯ್ಯ ಮತ್ತೆ ನನ್ನನ್ನು ಕೇಳಿದ.
"ಚೆನ್ನಾಗಿವ್ನಿ" ಎಂದೆ ನಾನು.
"ಇವಾಗ ಯಾವ್ ಕಡೆ ಇರೋದು?"
"ಬೆಂಗ್ಳೂರ್ ಪ್ಯಾಟೆ"
"ಹೊ ಯಾವ್ ದೇಸಾನೋ ಏನೋ, ಎಲ್ಲೋ ಒಂತಾವ್ ಚೆನ್ನಾಗಿದ್ರೆ ಅಷ್ಟೆ ಸಾಕು" ಎಂದು ಹೇಳುತ್ತಾ ಚಾಮಯ್ಯ ಒಂದು ಕಲ್ಲು ತೆಗೆದುಕೊಂಡು ಬಸವನ ಕಡೆಗೆ ಎಸೆದ.
ನಾವು ಮೂವರು ಅಲ್ಲೆ ಮರದ ನೆರಳಿನಲ್ಲಿ ಮಾತನಾಡುತ್ತ ಕುಳಿತಿರುವಾಗಲೆ ಒಬ್ಬ ಹೆಂಗಸು ತಟ್ಟೆಯಲ್ಲಿ ಹರಿಶಿನ ಕುಂಕುಮ ಹೂವು ಹೀಗೆ ಹಲವಾರು ಪೂಜೆ ಸಾಮಾನುಗಳನ್ನು ತಂದು ಬಸವನಿಗೆ ಪೂಜೆ ಮಾಡಲು ಆರಂಭಿಸಿದಳು. ಇದನ್ನು ನಾನು ಮತ್ತು ಶಂಕ್ರಣ್ಣ ಸುಮ್ಮನೆ ಗಮನಿಸುತ್ತ ನಿಂತಿದ್ದೆವು. ಚಾಮಯ್ಯ ಮಾತ್ರ ಇದ್ದಕ್ಕಿದ್ದ ಹಾಗೆ ಆ ಹೆಂಗಸನ್ನು ಉದ್ಧೇಶಿಸಿ ಏರು ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದನು.
"ದೇವ್ರು ದೇವ್ರು ಅಂತೀರಲ್ಲ ಎಲ್ರಮ್ಮ ನಿಮ್ ದೇವ್ರು?"
ಚಾಮಯ್ಯ ಹೀಗೆ ಹೇಳುತ್ತಿದ್ದಾಗೆ ಆ ಹೆಂಗಸು ನಮ್ಮ ಕಡೆಗೆ ಒಮ್ಮೆ ನೋಡಿ ಮತ್ತೆ ಬಸವನ ಹಣೆಗೆ ಹರಿಶಿನ ಕುಂಕುಮ ಹಚ್ಚುತ್ತ ತನ್ನ ಪೂಜೆಯನ್ನು ಮುಂದುವರೆಸಿದಳು.
ಚಾಮಯ್ಯ ಮತ್ತೆ ಮಾತು ಶುರು ಮಾಡಿದ.
"ಎಲ್ಲೋದ್ನಮ್ಮ ಗುಡ್ಡುದ್ ದೇವ್ರು? ಮನುಗ್ಬುಟ್ಟವ್ನ?"
"ಅವತ್ತು ಮೆರೆದಾಡ್ಕೊಂಡು ದೇವ್ರು ಹೆಸ್ರು ಹೇಳ್ಕೊಂಡು ಈ ಬಸುವನ್ನ ಬುಟ್ರಲ್ಲ, ಇವತ್ತು ಯಾವನಾರ ಅನ್ನ ತಿನ್ನೊ ಮರ್ಯಾದಸ್ಥ ಇತ್ತಾಗ್ ಬಂದು ನೋಡೌವ್ನ?"
"ನೀವ್ ಹೆಂಗುಸ್ರು ಬತ್ತಿರಿ, ಹರಿಶ್ನ ಕುಂಕುಮ ಬಳ್ದು ಪೂಜೆ ಪುರುಸ್ಕಾರ ಮಾಡ್ತಿರಿ. ಏನ್ ಬತ್ತು ಸುಕ?ಹಿಂಗೆಲ್ಲಾ ಮಾಡುದ್ರೆ ಬಸುನ್ ಗಾಯ ವಾಸಿ ಮಾಡಾನೇ ನಿಮ್ ದೇವ್ರು?"
"ಆ ಜಾತಿಗ್ ಒಂದ್ ದೇವ್ರು ಈ ಜಾತಿಗ್ ಒಂದ್ ದೇವ್ರು ಅಂತ ಇರೋ ಬರೋ ದೇವುರ್ನೆಲ್ಲಾ ನೀವೇ ಹುಟ್ಟುಸುದ್ರಿ. ಈಗ ಆ ದೇವ್ರು ತಾನೆ ಏನ್ ಮಾಡಾನು! ನಿಮ್ ಜಾತಿಗೊಳ್ ಕಿತ್ತಾಟನೇ ನೋಡನೋ?, ಬಡ ಬಗ್ರು ಕಷ್ಟನೇ ನೋಡನೋ?, ಈ ಪ್ರಾಣಿ ಪಕ್ಷಿಗೊಳ್ ಗೋಳ್ ನೋಡನೋ?".
ಇಷ್ಟು ಹೇಳಿ ಚಾಮಯ್ಯ ಸುಮ್ಮನೆ ಕುಳಿತುಬಿಟ್ಟ. ಆ ಹೆಂಗಸಂತು ಚಾಮಯ್ಯನ ಯಾವ ಮಾತಿಗೂ ಕಿವಿಗೊಡದೆ ತನ್ನ ಪೂಜೆ ಕಾರ್ಯಕ್ರಮದಲ್ಲಿ ಮುಳುಗಿ ಹೋಗಿದ್ದಳು.
ಚಾಮಯ್ಯ ಹೀಗೆ ಒಂದೇ ಸಮನೆ ಯಗ್ಗಾ ಮುಗ್ಗಾ ಮಾತನಾಡುತ್ತಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾವು ಚಿಕ್ಕವರಿದ್ದಾಗ ಕರಡಿ ಕತೆ, ಹುಲಿ ಕತೆ ಹೇಳಿ ನಮ್ಮನ್ನು ರಂಜಿಸುತ್ತಿದ್ದ ಚಾಮಯ್ಯನಿಗೂ ಈವಾಗ ಇಲ್ಲಿ ಮುಕ್ಕೋಟಿ ದೇವತೆಗಳೆಲ್ಲಾ ನರ ಮಾನವನ ಸೃಷ್ಟಿ ಎಂದು ಹೇಳುತ್ತಿರುವ ಈ ಚಾಮಯ್ಯನಿಗೂ ಬಹಳ ವ್ಯತ್ಯಾಸವಿದೆ ಎನಿಸಿತು.
ಗುಡ್ಡದ ಮೇಲಿನ ದೇವರ ಒಕ್ಕಲಿಗೆ ಸೇರಿದ ಜಾತಿಯವರು ದೇವರ ಜಾತ್ರೆ ನಡೆಸುವ ವಿಚಾರಕ್ಕೆ ಕಿತ್ತಾಡಿಕೊಂಡು ಎರಡು ಗುಂಪುಗಳಾಗಿ ಹೊಡೆದು ಹೋಗಿದ್ದರಿಂದ ಕಳೆದ ಕೆಲವು ವರ್ಷಗಳಿಂದ ನಮ್ಮೂರಿನಲ್ಲಿ ಜಾತ್ರೆ ನಿಂತುಹೋಗಿತ್ತು. ಈ ಜಗಳದ ದೆಸೆಯಿಂದಾಗಿ ಈ ಎರಡೂ ಗುಂಪಿನವರು ದೇವರಿಗೆ ಬಿಟ್ಟಿದ್ದ ಬಸವ ಗಾಯಗೊಂಡಿದ್ದರು ಸಹ ಅದನ್ನು ನೋಡಿಯೂ ನೋಡದವರಂತೆ ಇದ್ದು ಸರಿಯಾದ ಸಮಯದಲ್ಲಿ ಔಷದ ಕೊಡಿಸದೇ ಇದ್ದುದ್ದರಿಂದ ಈ ಗುಡ್ಡೆ ಬಸವನ ಗಾಯ ವಾಸಿ ಮಾಡಲಾಗದ ಹಂತಕ್ಕೆ ಬಂದಿತ್ತು. ದೇವರ ಒಕ್ಕಲಿನವರಿಗೇ ಬೇಡದ ಉಸಾಬರಿ ನಮಗೇಕೆ ಎಂದು ಊರಿನ ಜನರು ಸಹ ಬಸವನ ಕಡೆಗೆ ಮುಖ ಮಾಡಲಿಲ್ಲವಂತೆ ಹಾಗಾಗಿ ಹಲವು ಬಾರಿ ಚಾಮಯ್ಯನೇ ಆಸ್ಪತ್ರೆಯಲ್ಲಿ ಒಂದಿಷ್ಟು ಔಷಧಿ ಬೇಡಿಕೊಂಡು ತಂದು ಗಾಯಕ್ಕೆ ಹಾಕಿ ಉಪಚಾರ ಮಾಡಿದ್ದಾನೆ ಎಂದು ಶಂಕ್ರಣ್ಣ ನನಗೆ ತಿಳಿಸಿದ್ದ.
೩
ಆ ಹೆಂಗಸು ಗಂಧದ ಕಡ್ಡಿ ಹಚ್ಚಿ ಗುಡ್ಡೆ ಬಸವನಿಗೆ ಪೂಜೆ ಮಾಡುತ್ತಿದ್ದಳು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ಚಾಮಯ್ಯ ನಂತರ ಕಣ್ಣು ಮುಚ್ಚಿ ಏನೇನೋ ಗೊಣಗಲು ಶುರು ಮಾಡಿದ. ನನ್ನ ಕಿವಿಗಳು ಅರಳಿ ಚಾಮಯ್ಯನ ಧ್ವನಿಯನ್ನ ಆಲಿಸಲು ಹೆಣಗಾಡುತ್ತಿದ್ದವು. ಅಷ್ಟರಲ್ಲೇ ಚಾಮಯ್ಯನ ಧ್ವನಿ ಜೋರಾಯಿತು.
"ನಮ್ ದೇವ್ರು ನಮ್ ದೇವ್ರು ಅಂತ ಮೊದ್ಲು ಎಲ್ಲಾ ಬಂದ್ರು. ಸಾಲ್ ಸಾಲಾಗ್ ಜನ ದಂಡೆತ್ಕೊಂಡ್ ಬಂದ್ರು. ಹಾರ ಗೆಜ್ಜೆ ಪೂಜೆ ಸಾಮಾನು ಎಲ್ಲನೂ ಒತ್ಕೊಂಡ್ ಬಂದ್ರು. ಸುತ್ಲೂ ಹತ್ತಳ್ಳಿಗೆ ಊಟ ಹಾಕ್ಸುದ್ರು. ಕುಣುದ್ರು ಕುಪ್ಪಳುಸುದ್ರು. ಅವನ್ಯಾವನ್ದೋ ಎಳೆ ಹಸ ಒಡ್ಕಬಂದ್ರು. ಇದೇ ನಮ್ ದೇವರ್ನ ಒತ್ಕೊಳೊ ಬಸವ ಅಂದ್ರು. ಗುಡ್ಡದ್ ದೇವ್ರು ಇದೆ ಅಂದ್ರು. ಎಲ್ಲಾ ಸೇರ್ಕೊಂಡು ಅದ್ಕೆ ಪೂಜೆ ಪುರುಸ್ಕಾರ ಮಾಡಿ ಕೊನೆಗೆ ಕಾಡಗ್ ಹಟ್ಟುದ್ರು".
"ಮನ್ಸನ್ ಬುಟ್ಟು ಎಲ್ಲಾರು ದೇವ್ರು ಇದ್ದನೆ?"
"ಈ ಬಸ್ವ ಹೋದ. ಸೀದ ಗುಡ್ಡುದ್ ಮ್ಯಾಲ್ ಗುಡಿತಕ್ ಓದ. ಉಡುಕ್ತಾ ಉಡುಕ್ತಾ, ಅಲ್ಲೆಲ್ಲಾ ಸುತ್ತಾ ಮುತ್ತಾ ಉಡುಕ್ತಾ ಅಂತ ಕಾಣ್ತದೆ. ಆ ದೇವ್ರು ಬಸುಂಗೆ ಕಂಡ್ನೋ ಏನೋ ನಾನಂತು ಕಾಣೆ. ಆ ಕಾಡಲ್ ತಿರ್ಗಿ ತಿರ್ಗಿ ಕೊನೆಗೆ ತಿರ್ಗ ಊರೊಳಕೆ ಒನಗೊಳ್ ತಕೆ ಬಂದ".
"ಅವ್ರೊಳ್ಗೆ ಇರೋ ದೇವುರ್ನ ಹುಡುಕ್ತೆ ಇರೋ ಈ ಜನ 'ನಡಿ ನಡಿ ಗುಡ್ಡುದ್ ಮ್ಯಾಕ್ ನಡಿ ನಮ್ ದೇವ್ರು ನಿನ್ ಮ್ಯಾಲೆ ಸಂಚಾರ ಮಾಡ್ಬೇಕು' ಅಂತ ಆ ಬಸ್ವುನ್ನ ತಿರ್ಗ ಗುಡಿತಕ್ ಅಟ್ಟುದ್ರು. ಈ ಬಸ್ವ ಮಾತ್ರ ತಿರ್ಗ ತಿರ್ಗ ಊರೊಳಕ್ ಬತ್ತನೇ ಇದ್ದ. ಕೊನೆಗೊಂದಿನ ಊರಲ್ಲೆ ಬಂದು ಸೇರ್ಕೊಂಡ".
"ಈ ಮೂರ್ಕಾಸುನ್ ಜನ ಇವ್ರ ಸೀಮೆಗಿಲ್ದಿರೋ ದೇವ್ರು ಸಂಚಾರ ಮಾಡ್ಲಿ ಅಂತ ಅವತ್ತು ಈ ಗುಡ್ಡೆ ಬಸ್ವುನ್ನ ತಂದು ಮೆರ್ಸುದ್ರು ಇವಾಗ ಇದ್ಕೆ ಗಾಯ ಆಗಿ ದಿಕ್ಕು ದೆಸೆ ಇಲ್ದೆ ಬಿದ್ದದೆ. ಅತ್ತಾಗೆ ಆ ದೇವ್ರು ಇದ್ನ ನೋಡ್ತಾಯಿಲ್ಲ ಇತ್ತಾಗೆ ಈ ಜನಗೊಳು ಕ್ಯಾರೆ ಅಂತ ಇಲ್ಲ".
ಇದನೆಲ್ಲಾ ಕೇಳುತ್ತಿದ್ದ ನಾನು ಬೇರೆ ಪ್ರಪಂಚದಲ್ಲಿ ಮುಳುಗಿರುವಂತೆ ಅನ್ನಿಸುತ್ತಿತ್ತು. "ಯೋ ಚಾಮಯ್ಯ" ಎಂದು ಶಂಕ್ರಣ್ಣ ಕರೆದದ್ದು ನನಗೆ ಕೇಳಿಸಿತು. ನಂತರ ಕಣ್ಣು ತೆರೆದು ನಮ್ಮ ಕಡೆಗೆ ನೋಡಿದ ಚಾಮಯ್ಯ ಎದ್ದು ನಿಂತುಕೊಂಡ ಹಾಗೆಯೇ ಗುಡ್ಡೆ ಬಸವನಿಗೆ ಪೂಜೆ ಮಾಡುತ್ತಿದ್ದ ಹೆಂಗಸಿನ ಕಡೆಗೆ ನೋಡುತ್ತಾ
"ಮಾಡಿ ಮಾಡಿ ಪೂಜೆ ಮಾಡಿ. ಕಲ್ಲು ಮಣ್ಣು ಕಸ ಕಡ್ಡಿ ನಾಯಿ ನರಿಗೆಲ್ಲಾ ಪೂಜೆ ಮಾಡಿ".
" ಒಂದ್ ಮೂಕ್ ಪ್ರಾಣಿ ಉಳಿಸ್ಕೊಳಕ್ ಆಗ್ದಿರೋ ತಿರುಬೋಕುಗಳು ನೀವು. ಈಗ್ ಬಂದು ಪೂಜೆ ಪುರುಸ್ಕಾರ ಮಾಡುದ್ರೆ ಏನ್ ಆದದು?"
"ಕಾಗೆನ ಸನಿಮಾತ್ಮ ಅಂತಿರಲ್ಲ. ಆ ಸನಿಮಾತ್ಮ ನೀವೆ ಹುಟ್ಸುದ್ ದೇವ್ರೆ ಅಲ್ವೆ? ಈ ಬಸ್ವುನ್ನ ದೇವ್ರು ಅಂತ ಮೆರುಸ್ದೊರು ನೀವೆ ಅಲ್ವೆ? ಈಗ ಆ ಸನಿಮಾತ್ಮು ಬಂದು ಬಸ್ವುನ್ನ ತಿನ್ತಾವ್ನಲ್ಲ ಇದ್ನ ಯಾವ್ ದೇವ್ರುತಾವು ಏಳ್ಕೊಂಡಿರಿ?"
"ನಿಮ್ ಜಾತಿ ಧರ್ಮಗೊಳ್ನೆಲ್ಲಾ ತಿಪ್ಪೆಗ್ ಎಸಿರಿ. ನೀವ್ ಉಟ್ಸಿರೋ ದೇವ್ರ್ನೆಲ್ಲಾ ಬೀದಿಗ್ ಬಿಸಾಕಿ. ದುಡ್ಡು ಕಾಸು ಜಾತಿ ಧರ್ಮ ಅಂತ ಕಿತ್ತಾಡೊರ್ನೆಲ್ಲಾ ಕ್ಯಾಕರ್ಸಿ ಉಗ್ದು ಊರಿಂದ ಆಚ್ಗೆ ಅಟ್ಟಿ." ಎಂದು ಹೇಳುತ್ತಾ ಚಾಮಯ್ಯ ನಾವು ಬಂದ ದಾರಿಯ ಕಡೆಗೆ ಹೊರಟ.
"ಇದ್ಯಾಕಯ್ಯ ಒಂಟ್ಬುಟ್ಟೆ" ಎಂದು ಶಂಕ್ರಣ್ಣ ಕರೆಯುತ್ತಿದ್ದರು ಚಾಮಯ್ಯ ತಿರುಗಿಯೂ ನೋಡದೆ ತನ್ನ ದಾರಿಯಲ್ಲಿ ಹೊರಟ.
ಚಾಮಯ್ಯ ಹೇಳಿದ ಮಾತುಗಳನ್ನು ನಾನು ನನ್ನದೇ ಆದ ಜ್ಞಾನ ಸಂಪತ್ತಿನಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಅಲ್ಲೆ ಕುಳಿತುಬಿಟ್ಟೆ. ಶಂಕ್ರಣ್ಣನಿಗೆ ನಾನು ಏನನ್ನೋ ಯೋಚಿಸುತ್ತಿದ್ದೀನಿ ಎಂದು ತಿಳಿದಿರಬೇಕು ಆತ ನನ್ನನ್ನು ಮಾತನಾಡಿಸದೇ ಸುಮ್ಮನೇ ದೂರದಲ್ಲಿ ಕುಳಿತುಬಿಟ್ಟ. ಪೂಜೆ ಮುಗಿಸಿ ಹೆಂಗಸು ಗುಡ್ಡೆ ಬಸವನಿಗೆ ಅ್ವಲ್ಪ ದೂರದಲ್ಲಿ ಬಿಟ್ಟಿದ್ದ ತನ್ನ ಚಪ್ಪಲಿಗಳ ಕಡೆಗೆ ಹೋಗುತ್ತಿದ್ದಳು. ಹರಿಶಿನ ಕುಂಕುಮ ಬಳಿದುಕೊಂಡು ಜನರ ದೃಷ್ಟಿಯಲ್ಲಿ ದೇವರ ಪ್ರತಿರೂಪವಾಗಿದ್ದ ಗುಡ್ಡೆ ಬಸವನ ಮಾಂಸದ ರುಚಿ ನೋಡಲು ಹದ್ದು ಮತ್ತು ಕಾಗೆಗಳು ಆಕಾಶದಲ್ಲಿ ಹೊಂಚು ಹಾಕುತ್ತಾ ವೃತ್ತಾಕಾರದಲ್ಲಿ ಸುತ್ತುತ್ತಿದ್ದವು.
*****
ಪಟ ಕೃಪೆ: ಇಂಟರ್ನೆಟ್
ಈ ಪಟಗಳನ್ನು ಕೇವಲ ಸಾಂದರ್ಭಿಕ ಪಟಗಳನ್ನಾಗಿ ಬಳಸಿಕೊಳ್ಳಲಾಗಿದೆ.

No comments:
Post a Comment